ರಾಜ್ಯ ಸರ್ಕಾರದ ವೈಫಲ್ಯವೇ ಕಾಲ್ತುಳಿತ ಘಟನೆಗೆ ಕಾರಣ: ಪ್ರಹ್ಲಾದ್ ಜೋಶಿ
"ತುರ್ತು ಸೇವೆಗಳನ್ನು ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ"

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 10 ಜನರು ಸಾವನ್ನಪ್ಪಿರುವುದು ಹಾಗೂ ಸುಮಾರು 30ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಸೂಕ್ತ ವ್ಯವಸ್ಥೆಗಳು, ಯೋಜನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಪರಿಣಾಮ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆರ್ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಈ ಸಂಬಂಧ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ವಿಫಲವಾಗಿದೆ. ಸಂಭ್ರಮಾಚರಣೆಗಳು ನಡೆಯುತ್ತದೆ, ಆದರೆ ರಾಜ್ಯ ಸರ್ಕಾರವು ಸರಿಯಾದ ರೂಪುರೇಷ ಹಾಗೂ ತಯಾರಿ ಮಾಡಿಕೊಳ್ಳದೇ ಇರುವುದು ಇಂತಹ ದುರಂತಕ್ಕೆ ಕಾರಣವಾಗಿದೆ. ತುರ್ತು ಸೇವೆಗಳನ್ನು ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕೆಟ್ಟ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಮತ್ತು ಹೊಣೆಗಾರಿಕೆಯನ್ನು ಸರ್ಕಾರವೇ ತಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 10 ಜನರು ಸಾವನ್ನಪ್ಪಿರುವುದು ಹಾಗೂ ಸುಮಾರು 30 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಸೂಕ್ತ ವ್ಯವಸ್ಥೆಗಳು, ಯೋಜನೆ ಮತ್ತು ಜನಸಂದಣಿಯ ನಿರ್ವಹಣೆ ಮಾಡದ ಪರಿಣಾಮ ಇಂತಹ ಹೃದಯವಿದ್ರಾವಕ ಘಟನೆ ನಡೆದಿದೆ.
— Pralhad Joshi (@JoshiPralhad) June 4, 2025
ಕರ್ನಾಟಕ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯನ್ನು… pic.twitter.com/TRX7IFf8xf







