ಆಶಾ ಕಾರ್ಯಕರ್ತೆಯರಿಗೆ ಕೊಡಲು ರಾಜ್ಯ ಸರಕಾರದ ಬಳಿ ಹಣವಿಲ್ಲ: ಆರ್. ಅಶೋಕ್ ಟೀಕೆ
"ಆಶಾಗಳಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ಸರಕಾರವೇ ನೇರ ಕಾರಣ"

ಆರ್. ಅಶೋಕ್
ಬೆಂಗಳೂರು: ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮತ್ತು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟನಿರತ ಆಶಾ ಕಾರ್ಯಕರ್ತೆಯರಿಗೆ ಕೊಡಲು ರಾಜ್ಯ ಸರಕಾರದ ಬಳಿ ಹಣವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕರು ಆಶಾ ಕಾರ್ಯಕರ್ತೆಯರನ್ನು ಕರೆದು ಮಾತಾಡಿ ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದರು. ಇದೀಗ ಕೊರೆಯುವ ಚಳಿಯಲ್ಲಿ ರಾತ್ರಿಯಿಡೀ ಕುಳಿತರೂ ಸ್ಪಂದಿಸಿಲ್ಲ ಎಂದು ದೂರಿದರು.
ತಾಯಂದಿರಿಗೆ ಹಾಲು ಕುಡಿಸುವ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದನ್ನೂ ಸರಕಾರ ಕಲ್ಪಿಸಿಲ್ಲ. 10 ಸಾವಿರ ಮಹಿಳೆಯರಿಗೆ ಕೇವಲ ಎಂಟು ಶೌಚಾಲಯಗಳಿವೆ. ಇಂತಹ ಸಮಯದಲ್ಲಿ ಸಚಿವ ಕೃಷ್ಣ ಬೈರೇಗೌಡ ‘ಬೆಂಗಳೂರು ಹಬ್ಬ’ ಮಾಡಲು ಮುಂದಾಗಿದ್ದಾರೆ. ಅವರು ಗೌರವ ಧನಕ್ಕಾಗಿ ಆಗ್ರಹಿಸುತ್ತಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಆಡಂಬರದ ದಸರಾ ಉತ್ಸವ ಬೇಡವೆಂದರೂ ಅದಕ್ಕಾಗಿ ಕೋಟ್ಯಂತರ ರೂ.ಖರ್ಚು ಮಾಡಲಾಯಿತು. ಜೊತೆಗೆ ಸಿಎಂ ನಿವಾಸ, ಕಚೇರಿಗೆ ಖರ್ಚು ಮಾಡಲಾಗಿದೆ. ಚಳಿಯಿಂದಾಗಿ ಮಹಿಳೆಯರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವರಿಗೆ ಮೊಬೈಲ್ ಕ್ಲಿನಿಕ್ ಆರಂಭಿಸಬಹುದಿತ್ತು. ಆಶಾಗಳಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ಸರಕಾರವೇ ನೇರ ಕಾರಣ ಎಂದು ಅವರು ಎಚ್ಚರಿಸಿದರು.
ಚುನಾವಣೆಗೆ ಮೊದಲು ಆಶಾ ಕಾರ್ಯಕರ್ತೆಯರನ್ನು ಕರೆದು ಕಾಂಗ್ರೆಸ್ಗೆ ಮತ ಹಾಕಿ ಎಂದು ಮನವಿ ಮಾಡಲಾಗಿತ್ತು. ಪ್ರಿಯಾಂಕ ಗಾಂಧಿ ಗೌರವಧನ ಹೆಚ್ಚಿಸುವುದಾಗಿ ಆಶಾಗಳಿಗೆ ಭರವಸೆ ನೀಡಿದ್ದರು. ನುಡಿದಂತೆ ನಡೆಯುವ ಬಗ್ಗೆ ಜಾಹೀರಾತು ನೀಡಿ ಖರ್ಚು ಮಾಡಿದರೂ ಗೌರವ ಧನಕ್ಕಾಗಿ ಏನೂ ಖರ್ಚು ಮಾಡಿಲ್ಲ. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತರಿಗೆ 15ಸಾವಿರ ರೂ. ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ. ಅವರು ಇನ್ನು ಹೋರಾಟಕ್ಕೆ ಇಳಿಯುತ್ತಾರೆ ಎಂದರು.
‘ಭಾರತ್ ಜೋಡೋ ಸಂಘ’ಗಳು ಕಾಂಗ್ರೆಸ್ನ ಗಂಜಿ ಕೇಂದ್ರಗಳಾಗಿವೆ. ಸಚಿವರು ಆ ಸಂಘಗಳಲ್ಲಿ ಕಾಂಗ್ರೆಸ್ನವರು ಮಾತ್ರ ಇರಬೇಕೆಂದು ಸೂಚಿಸಿದ್ದಾರೆ. ಇದರ ಜೊತೆಗೆ ಗ್ಯಾರಂಟಿ ಅನುಷ್ಠಾನ ಸಮಿತಿಗೂ ಕೋಟ್ಯಂತರ ರೂ.ಖರ್ಚು ಮಾಡಲಾಗುತ್ತಿದೆ. ಜನರ ತೆರಿಗೆಯ ಹಣ ಪಕ್ಷದ ಕಾರ್ಯಕರ್ತರಿಗೆ ಖರ್ಚು ಮಾಡಲಾಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದಾಗಲೂ ಸಿಎಂ ವಿದೇಶ ಪ್ರವಾಸ ಮಾಡಿದ್ದಾರೆ. ಬರಗಾಲದಲ್ಲೂ ಸಚಿವರು ಹಬ್ಬ ಮಾಡಲು ಮುಂದಾಗಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಆಡಂಬರ ಮಾಡಬಾರದು ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಇದೀಗ ಬಿಪಿಎಲ್ಗೆ ಸೀಮಿತಗೊಳಿಸಲಾಗಿದೆ. ಮೂರೂವರೆ ವರ್ಷದಲ್ಲಿ ಒಂದು ಕುಟುಂಬಕ್ಕೆ 84ಸಾವಿರ ರೂ. ನೀಡಬೇಕಿತ್ತು. ಆದರೆ 30ರಿಂದ 35 ಸಾವಿರ ರೂ.ನೀಡಲಾಗಿದೆ. ಅಂದರೆ ಒಬ್ಬರಿಗೆ ಒಂದು ಬಾರಿ ನೀಡಿದರೆ, ಮತ್ತೆ ಅವರಿಗೆ ಹಣ ನೀಡುವುದಿಲ್ಲ ಎಂದ ಅವರು, ಬರಗಾಲದಲ್ಲಿ ರೈತರಿಗೆ ಈ ಸರಕಾರ ಬಿಡಿಗಾಸನ್ನು ನೀಡಿಲ್ಲ. ಹೀಗಿರುವಾಗ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ನಾವು(ಪ್ರತಿಪಕ್ಷ) ಏಕೆ ಹೋಗಬೇಕು ಎಂದು ಪ್ರಶ್ನಿಸಿದರು.
‘ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರೇ ಆನೆಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ರಾಜೀನಾಮೆಗೆ ಮುಂದಾಗಿದ್ದಾರೆ. ಸರಕಾರ ಎಲ್ಲರನ್ನೂ ಕರೆದು ಚರ್ಚೆ ಮಾಡಬೇಕಿತ್ತು. ಏಕಾಏಕಿ ಆನೆಗಳನ್ನು ಓಡಿಸಿದರೆ ಅವುಗಳಾದರೂ ಎಲ್ಲಿಗೆ ಹೋಗುತ್ತವೆ. ಸರಕಾರದ ವಿರುದ್ಧ ಹೋರಾಟ ನಡೆಸಲು ಹಾಗೂ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವ ಕುರಿತು ನ.26ರಂದು ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ’
-ಆರ್.ಅಶೋಕ್, ಪ್ರತಿಪಕ್ಷ ನಾಯಕ






