ನಾಳೆಯಿಂದ ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಾರಂಭ; ಆಧಾರ್ ಕಾರ್ಡ್ ಕಡ್ಡಾಯ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.21: ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲೆಡೆ ನಾಳೆ(ಸೆ.22)ಯಿಂದ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಪ್ರಾರಂಭಿಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಆರು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್ ಆರ್.ನಾಯ್ಕ್ ಹೇಳಿದ್ದಾರೆ.
ರವಿವಾರ ನಗರದ ದೇವರಾಜು ಅರಸು ಭವನದಲ್ಲಿರುವ ಆಯೋಗದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಎರಡು ಕೋಟಿ ಮನೆಗಳ ಜಿಯೋ-ಟ್ಯಾಗಿಂಗ್ ಹಾಗೂ ಗಣತಿ ಬ್ಲಾಕಿನ ನಕ್ಷೆ ಮಾಡುವ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆ ಅಧಿಕೃತವಾಗಿ ಸೆ.22ರಿಂದ ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ ಎಂದರು.
ಬ್ಲಾಕ್ ನಕ್ಷೆಗಳಲ್ಲಿ ಮನೆಗಳನ್ನು ಗುರುತಿಸುವುದಲ್ಲದೇ ರಸ್ತೆಗಳನ್ನು ನಕ್ಷೆಗಳಲ್ಲಿ ನಮೂದಿಸಿದ್ದು, ಗಣತಿದಾರರು ಸಮೀಕ್ಷೆ ಮಾಡಬೇಕಾದ ಮನೆಯನ್ನು ತಲುಪಲು ಅನುಕೂಲವಾಗುವಂತೆ ಮಾಡಿದ್ದೇವೆ. ಒಬ್ಬ ಸಮೀಕ್ಷಕರಿಗೆ ಸುಮಾರು 140 ರಿಂದ 150 ಮನೆಗಳನ್ನು ಹೊಂದಿರುವ ಬ್ಲಾಕ್ಗಳನ್ನು ಹಂಚಿಕೆ ಮಾಡಲಾಗಿದ್ದು, ಸುಮಾರು 2ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳು ಸಮೀಕ್ಷೆ ಮಾಡಲಿದ್ದಾರೆ. ಜತೆಗೆ, ವಿವಿಧ ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿವಹಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಒಬ್ಬ ಸಮೀಕ್ಷಕರು ಒಂದು ದಿನಕ್ಕೆ ಅಂದಾಜು 7 ರಿಂದ 8 ಮನೆಗಳನ್ನು ಸಮೀಕ್ಷೆ ಮಾಡಿದಲ್ಲಿ ರಾಜ್ಯಾದ್ಯಂತ ಇರುವ ಸುಮಾರು ಎರಡು ಕೋಟಿ ಕುಟುಂಬಗಳ ಮಾಹಿತಿಯನ್ನು 16 ದಿನಗಳಲ್ಲಿ ಮೊಬೈಲ್ ಆ್ಯಪ್ನಲ್ಲಿ ಸಂಗ್ರಹಿಸಬಹುದಾಗಿದೆ. ಸಮೀಕ್ಷೆಯಲ್ಲಿ ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶ ಹೊಂದಿರುವ ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸಲಾಗುತ್ತದೆ ಎಂದ ಅವರು, ಸಮೀಕ್ಷಾ ಕಾರ್ಯಕ್ಕಾಗಿ ಸಮೀಕ್ಷಾದಾರರಿಗೆ ಮತ್ತು ಮೇಲ್ವಿಚಾರಕರಿಗೆ ಅಗತ್ಯ ಪ್ರಮಾಣದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗದ ಇಲಾಖೆಯ ಆಯುಕ್ತ ದಯಾನಂದ ಸೇರಿದಂತೆ ಪ್ರಮುಖರಿದ್ದರು.
ಆಧಾರ್ ಕಡ್ಡಾಯ: ನಾಗರಿಕರು ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಪಡುವುದನ್ನು ತಪ್ಪಿಸಲು ಆಧಾರ್ ಕಾರ್ಡ್ ಸಂಖ್ಯೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರು ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
ಸಹಾಯವಾಣಿ: ಕೆಲಸದ ಮೇಲೆ ಹೊರಗೆ ಹೋಗಿರುವವರ ಮಾಹಿತಿಯನ್ನು ಪಡೆಯುವ ಸಲುವಾಗಿ ವೆಬ್ಸೈಟ್ https://kscbc.karnataka.gov.in ಅನ್ನು ಆರಂಭಿಸಲಾಗಿದೆ. ಜತೆಗೆ, ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಸಹಾಯವಾಣಿ ಸಂಖ್ಯೆ-80507 70004 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಗವು ಹೇಳಿದೆ.
ಬೆಂಗಳೂರಿನಲ್ಲಿ ವಿಳಂಬ: ಇತ್ತೀಚಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಆಸ್ತಿತ್ವಕ್ಕೆ ಬಂದಿದ್ದು, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರ ನೇಮಕ ಸೇರಿದಂತೆ ಹಲವು ಪ್ರಕ್ರಿಯೆಗಳಿಗೆ ವಿಳಂಬ ಆಗಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಸಮೀಕ್ಷೆ ಪ್ರಕ್ರಿಯೆ ಮೂರು ದಿನಗಳ ಬಳಿಕ ಆರಂಭವಾಗಲಿದೆ ಎಂದು ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಮಾಹಿತಿ ನೀಡಿದರು.







