ಎಐಸಿಸಿ ಅಧ್ಯಕ್ಷ ಖರ್ಗೆ ವಿರುದ್ಧ ಹೇಳಿಕೆ: ಚಕ್ರವರ್ತಿ ಸೂಲಿಬೆಲೆ ಗಡಿಪಾರಿಗೆ ಕಾಂಗ್ರೆಸ್ ಮನವಿ

ಬೆಂಗಳೂರು: ‘ಸುಳ್ಳುಗಳನ್ನು ಹಬ್ಬಿಸುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಚಕ್ರವರ್ತಿ ಸೂಲಿಬೆಲೆಯಂತಹ ಕ್ರಿಮಿಗಳನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ, ಕಾಂಗ್ರೆಸ್ ಪಕ್ಷ ಮನವಿ ಮಾಡಿದೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಅಯೋಗ್ಯ ಚಕ್ರವರ್ತಿ ಸೂಲಿಬೆಲೆ ಎನ್ನುವ ಸಮಾಜದ ಕೊಳಕು ಕ್ರಿಮಿಯೊಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಬಾಡಿಗೆ ಭಾಷಣ ಮಾಡಿಕೊಂಡು ಬದುಕುವ ಪರಾವಲಂಬಿ ಜೀವಿಗಳಿಗೆ ಶೋಷಿತ ಸಮುದಾಯದ ನಾಯಕರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಲೇವಡಿ ಮಾಡಿದೆ.
ಖರ್ಗೆ ಮನೆಯ ಶೌಚಾಲಯ ಸ್ವಚ್ಛ ಮಾಡ್ತೀರಾ?: ಈ ಮಧ್ಯೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು, ‘ಅಜ್ಞಾನಿ ಚಕ್ರವರ್ತಿ ಸೂಲಿಬೆಲೆಯಾಗಲಿ, ಅನಂತ್‍ಕುಮಾರ್ ಹೆಗ್ಗಡೆಯಾಗಲಿ ದೊಡ್ಡ ನಾಯಕರಿಗೆ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿ ನಾಯಕರಾಗುವ ಆಸೆ ಬಿಡಬೇಕು. ನೀವು ಹೀಗೆ ಟೀಕೆ ಮಾಡಿದರೆ ನಾವು ನಿಮ್ಮನ್ನು ಕೆಳಮಟ್ಟದ ಭಾಷೆಯಲ್ಲಿ ಟೀಕೆ ಮಾಡುವ ಅನಿವಾರ್ಯತೆಯೂ ಇಲ್ಲ ಅವಶ್ಯಕತೆಯೂ ಇಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನಿಮ್ಮ ಎಲ್ಲ ಟೀಕೆಗಳನ್ನು ನಾವು ಸ್ವೀಕರಿಸುತ್ತಾ ಕೂರುವುದಿಲ್ಲ. ನಿಮ್ಮ ತಪ್ಪನ್ನು ಕಾಂಗ್ರೆಸ್ ಪಕ್ಷ ಎತ್ತಿ ತೋರಿಸುತ್ತದೆ. ಖರ್ಗೆಯವರು ರಾಜ್ಯಕ್ಕೆ ಅನುಕೂಲವಾಗುವಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ಕೆಲಸಗಳ ಬಗ್ಗೆ ವಿಮರ್ಶೆ ಮಾಡಿದ್ದರೆ ಒಪ್ಪಬಹುದಿತ್ತು. ಆದರೆ, ಖರ್ಗೆಯವರು ಕಟ್ಟಿಸಿರುವ ಆಸ್ಪತ್ರೆಗೆ ತಮ್ಮ ಹೆಸರಿಟ್ಟದ್ದರೆ ಡ್ರೋಣ್ ಸರ್ವೆ ಮಾಡಲು ಈ ದೇಶದ ಕಾನೂನಿನಲ್ಲಿ ಅವಕಾಶವಿದೆ. ನೀವು ನಾಗಪುರದಲ್ಲಿ ಕಟ್ಟಿರುವ ನಿಮ್ಮ ಸಂಘ ಪರಿವಾರದ ಕಟ್ಟಡಕ್ಕೆ ಡ್ರೋಣ್ ಸರ್ವೆ ಮಾಡುವ ಅವಕಾಶವಿದೆಯಾ? ಎಂದು ರಮೇಶ್ ಬಾಬು ಖಾರವಾಗಿ ಪ್ರಶ್ನಿಸಿದ್ದಾರೆ.
ಸೂಲಿಬೆಲೆಯಾಗಲಿ, ಅನಂತ್‍ಕುಮಾರ್ ಹೆಗ್ಗಡೆಯಾಗಲಿ ನಾಥೂರಾಮ್ ಗೂಡ್ಸೆ ಮನಸ್ಥಿತಿಯಿಂದ ಹೊರಬಂದಿಲ್ಲ. ಇವೇ ಮನಸ್ಥಿತಿಗಳು ಖರ್ಗೆಯವರ ಮನೆ ಸುತ್ತಾ ಓಡಾಡಿಕೊಂಡು ಅವರಿಗೆ ತೊಂದರೆ ಕೊಡುವ ಕೆಲಸ ಮಾಡಿದ್ದವು. ತಿರುಪತಿ ವೆಂಕಟರಮಣ ಸ್ವಾಮಿಯ ನಾಮದ ಶೈಲಿಯಲ್ಲಿ ಕಾಣುವ ಇಎಸ್‍ಐ ಆಸ್ಪತ್ರೆಯ ಕಟ್ಟಡವನ್ನು ಖರ್ಗೆ ಎನ್ನುವ ಹೆಸರಿನಂತೆ ಕಾಣುತ್ತದೆ ಎಂದು ಹೇಳುತ್ತಿದ್ದೀರಿ. ನೀವು ಮೊದಲು ಕನ್ನಡ ವರ್ಣಮಾಲೆಯಲ್ಲಿ ಖರ್ಗೆ ಹೇಗೆ ಬರುತ್ತದೆ ಎಂದು ತಿಳಿದುಕೊಳ್ಳಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇಎಸ್‍ಐ ಆಸ್ಪತ್ರೆಯ ಕಟ್ಟಡವೇನಾದರೂ ಕನ್ನಡ ವರ್ಣಮಾಲೆಯ ಖರ್ಗೆ ಅನ್ನುವ ಅಕ್ಷರಗಳನ್ನು ಹೋಲುವ ರೂಪದಲ್ಲಿ ನಿರ್ಮಿತವಾಗಿದ್ದರೆ ನಾನು ಬಿಜೆಪಿಯ ದೊಡ್ಡ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರ ಮನೆಯ ಶೌಚಾಲಯ ಶುಚಿಗೊಳಿಸಲು ಸಿದ್ಧನಿದ್ದೇನೆ. ಇಲ್ಲವಾದರೆ ಸೂಲಿಬೆಲೆಯವರೇ ನೀವು ಖರ್ಗೆಯವರ ಮನೆ ಶೌಚಾಲಯವನ್ನು ಶುಚಿಗೊಳಿಸುತ್ತೀರಾ?. ನಿಮಗೆ ಸೈದ್ಧಾಂತಿಕವಾಗಿ ಖರ್ಗೆಯವರನ್ನು ಎದುರಿಸುವ ಶಕ್ತಿ ಇಲ್ಲದಿದ್ದರೆ ನಿಮ್ಮ ಸೋಲನ್ನು ಒಪ್ಪಿಕೊಳ್ಳಿ’ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.







