ಸ್ಟಿಂಗ್ ಆಪರೇಷನ್ ಪ್ರಕರಣ: ಸಂತ್ರಸ್ತೆ ಕಳುಹಿಸಿದ್ದ ಇ-ಮೇಲ್ ಎಲ್ಲಿ ಹೋಯಿತು?: ಎಚ್.ಡಿ.ಕುಮಾರಸ್ವಾಮಿ
"ಕಾಂಗ್ರೆಸ್ನ ಕೆಲವರು ಸಿದ್ದರಾಮಯ್ಯರನ್ನು ಮುಗಿಸಿ, ಹೊಸ ರಾಜಕೀಯ ಮಾಡಲು ಹೊರಟಿದ್ದಾರೆ"

ಬೆಂಗಳೂರು : ಸ್ಟಿಂಗ್ ಪ್ರಕರಣ ಸಂಬಂಧ ಸಂತ್ರಸ್ತೆಯೂ ರಾಜ್ಯ ಮಕ್ಕಳ ಆಯೋಗಗಕ್ಕೆ ಕಳುಹಿಸಿದ್ದ ಇ-ಮೇಲ್ ಎಲ್ಲಿ ಹೋಯಿತು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಪ್ರಶ್ನೆ ಮಾಡಿದ್ದಾರೆ.
ಮಂಗಳವಾರ ನಗರದ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣದ ಸಂತ್ರಸ್ತೆ ಕೃಪಾ ಆಳ್ವ ಅಧ್ಯಕ್ಷರಾಗಿದ್ದಾಗ ಮಕ್ಕಳ ಹಕ್ಕು ಆಯೋಗಕ್ಕೆ ಕಳಿಸಿರುವ ಇ-ಮೇಲ್ ಎಲ್ಲಿ ಹೋಯಿತು? ಅದನ್ನು ಇಟ್ಟುಕೊಂಡಿದೀರಾ? ಅಥವಾ ಅಳಿಸಿ ಹಾಕಿದ್ದೀರಾ? ಇ-ಮೇಲ್ ಗೂ ತನಿಖೆಗೆ ಏನು ಸಂಬಂಧ ಎಂದು ಅವರು ಕೇಳುತ್ತಿದ್ದಾರೆ. ಆಗ ಪ್ರಿಯಾಂಕ್ ಖರ್ಗೆ ಖಾತೆ ಬೇರೆ ಇತ್ತು. ಈಗ ಅವರಿಗೆ ಗೃಹ ಖಾತೆ ಕೊಡಲಾಗಿದೆ. ಆಗ ಬಂದಿದ್ದ ಇ-ಮೇಲ್ ನೋಡಿದ್ದವರನ್ನೇ ತನಿಖೆ ಮಾಡಲು ಹೇಳಿ. ಅದು ನನ್ನ ಯಾವುದು ವ್ಯಾಪ್ತಿಗೆ ಬರಲ್ಲ ಎಂದರೆ ಏನರ್ಥ? ಯಾಕೆ ಬರಲ್ಲ? ಮತ್ತೆ ಇದು ಯಾರಿಗೆ ಬರುತ್ತೆ? ಎಂದು ಕೇಳಿದರು.
ಈಗಾಗಲೇ ಹಲವು ಬಾರಿ ಸ್ಟಿಂಗ್ ಸೂತ್ರಧಾರರನ್ನು ಬಂಧಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ಅವರು ಹೈಕಮಾಂಡ್ ಮೇಲೆಯೂ ಒತ್ತಡ ಹೇರಿದ್ದಾರೆ. ಸಿದ್ದರಾಮಯ್ಯ ಅವರು ಹೇಳುತ್ತಿರುವುದನ್ನೆ ನಾನು ಕೂಡ ಹೇಳುತ್ತಿದ್ದೇನೆ. ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಒತ್ತಡದಿಂದ ತನಿಖೆಯ ದಾರಿ ತಪ್ಪುತ್ತಿದೆ. ಪೊಲೀಸರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಅವರು ಟೀಕಿಸಿದರು.
ತನಿಖೆಯ ದಾರಿ ತಪ್ಪುವುದು ಬೇಡ. ಅದನ್ನು ಸರಿ ಮಾಡಿಕೊಳ್ಳಿ ಎಂದಷ್ಟೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರ ವಿರುದ್ಧ ನಾನು ಹೋರಾಟ ಮಾಡಿಕೊಂಡು ಬಂದವನು. ಇಲ್ಲಿ ಸಿದ್ದರಾಮಯ್ಯನವರ ಮೇಲಿನ ಅನುಕಂಪಕ್ಕೆ ನಾನು ಮಾತಾಡಿಲ್ಲ. ರಾಜ್ಯದ ಜನತೆಗೆ ಹೇಳಲು ಬಯಸುತ್ತೇನೆ. ಇವತ್ತು ನಮ್ಮ ಸಮಾಜ ವ್ಯಕ್ತಿ ಸಿಎಂ ಆಗಿದ್ದಾರೆ, ಅವರ ಮೇಲಿನ ಅಸೂಯೆಗೆ ಹೊಟ್ಟೆ ಕಿವುಚಿಕೊಂಡು ಇದನ್ನೆಲ್ಲ ಹೇಳುತ್ತಿಲ್ಲ ನಾನು. ಎಂತಹ ದಾರಿದ್ರ್ಯ ರಾಜ್ಯಕ್ಕೆ ಬಂತು ಎಂಬ ನೋವಿನಿಂದ ಹೇಳಿದ್ದೇನೆ. ಇದೇನಾದರೂ ಮುಂದುವರೆದರೆ ಈ ರಾಜ್ಯ ಏನಾಗುತ್ತದೆ? ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇನೆ ಅಷ್ಟೇ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಪಕ್ಷದ ಕೆಲವರು ಇವತ್ತು ಸಿದ್ದರಾಮಯ್ಯ ಅವರನ್ನು ಮುಗಿಸಿ, ಈಗ ಹೊಸ ರಾಜಕೀಯ ಮಾಡಲು ಹೊರಟಿದ್ದಾರೆ. ಅದರ ಫಲವಾಗಿ 2028ಕ್ಕೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ ಅವರು, ಸಿದ್ದರಾಮಯ್ಯ ಅವರು ಹೈಕಮಾಡ್ ಹಾಗೂ ಪಕ್ಷದ ವರಿಷ್ಠರಿಗೆ ಗಟ್ಟಿಯಾಗಿಯೇ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. 2028ಕ್ಕೆ ನಾನು ಇರಬೇಕೋ ಬೇಡವೋ ನೀವೇ ಹೇಳಿ ಎಂದು ಅವರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆಂದು ವರದಿಯಾಗಿದೆ ಎಂದು ಅವರು ತಿಳಿಸಿದರು.






