ವಿದೇಶ ಪ್ರವಾಸದ ಮೋಜು ಮಸ್ತಿ ಸಾಕು; ಮೊದಲು ಆಶಾಗಳಿಗೆ ನ್ಯಾಯ ಒದಗಿಸಿ: ಸಿಎಂಗೆ ಆರ್.ಅಶೋಕ್ ಮನವಿ

ಆರ್.ಅಶೋಕ್ / ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ವಿದೇಶ ಪ್ರವಾಸದ ಮೋಜು ಮಸ್ತಿ ಸಾಕು. ಮೊದಲು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟನಿರತ ಆಶಾ ಕಾರ್ಯಕರ್ತೆಯರ ಬಳಿಗೆ ಹೋಗಿ, ಅವರ ಅಳಲು ಆಲಿಸಿ, ನ್ಯಾಯ ಒದಗಿಸಿ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಆಶಾಗಳು ಬೀದಿಗಿಳಿದು ಹೋರಾಡುತ್ತಿದ್ದರೂ, ಸಿಎಂ ಡಿ.ಕೆ.ಶಿವಕುಮಾರ್ ಮಾತ್ರ ವಿದೇಶ ಪ್ರವಾಸದಲ್ಲಿ ಬ್ಯುಸಿ. ಮಹಿಳೆಯರ ಮತ ಬೇಕು, ಆದರೆ ಅವರ ಕಷ್ಟ ಕೇಳಲು ಮಾತ್ರ ಸಮಯವಿಲ್ಲವೇ?. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾಗಳ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ.
ಬಿಸಿಲು, ಹಸಿವು, ಅನಾರೋಗ್ಯವನ್ನೂ ಲೆಕ್ಕಿಸದೆ ಮಹಿಳೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುತ್ತಿದ್ದಾರೆ. ಪ್ರತಿಭಟನೆಯ ನಡುವೆಯೇ ಮಹಿಳೆಯರು ಅಸ್ವಸ್ಥರಾಗುತ್ತಿದ್ದಾರೆ. ಆದರೂ ಸರಕಾರದಿಂದ ಸ್ಪಂದನೆಯಿಲ್ಲ. ಗೌರವಧನ ಹೆಚ್ಚಳ, ನಿವೃತ್ತಿ ಸೌಲಭ್ಯ ಸೇರಿ ಹಲವು ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿದಿದ್ದಾರೆ. ಸಿಎಂ ನೀಡಿದ್ದ 2,500ರೂ.ಹೆಚ್ಚಳದ ಭರವಸೆಯೂ ಸಮರ್ಪಕವಾಗಿ ಈಡೇರಿಲ್ಲ ಎಂಬುದು ಅವರ ಆಕ್ರೋಶ. ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಸರಕಾರಕ್ಕೆ ಇನ್ನೆಷ್ಟು ದಿನ ಬೇಕು?’ ಎಂದು ಪ್ರಶ್ನಿಸಿದ್ದಾರೆ.
‘ಒಂದು ಕಡೆ ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿ ಹೋರಾಡುತ್ತಿದ್ದರೆ, ಇನ್ನೊಂದು ಕಡೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ವಿದೇಶ ಪ್ರವಾಸವೇ ಮುಖ್ಯವಾಗಿದೆ. ಚುನಾವಣೆ ಬಂದಾಗ ಮಹಿಳೆಯರ ಮನೆ ಬಾಗಿಲಿಗೆ ಹೋಗಿ ಮತ ಕೇಳುವ ಕಾಂಗ್ರೆಸ್ ನಾಯಕರು, ಅಧಿಕಾರ ಸಿಕ್ಕ ಮೇಲೆ ಅದೇ ಮಹಿಳೆಯರು ಬೀದಿಯಲ್ಲಿ ಕುಳಿತು ಹೋರಾಡುತ್ತಿದ್ದರೂ ತಿರುಗಿಯೂ ನೋಡುತ್ತಿಲ್ಲ. ಮಹಿಳೆಯರ ಹೆಸರಿನಲ್ಲಿ ಗ್ಯಾರಂಟಿಗಳ ಪ್ರಚಾರ ಮಾಡುವುದು ಸುಲಭ. ಆದರೆ ಅವರ ಬೆವರಿಗೆ ತಕ್ಕ ಗೌರವ, ದುಡಿಮೆಗೆ ತಕ್ಕ ಸಂಭಾವನೆ ನೀಡಲು ಮಾತ್ರ ಈ ಸರಕಾರಕ್ಕೆ ಮನಸ್ಸಿಲ್ಲ. ಸಿಎಂ ಶಿವಕುಮಾರ್ರೇ, ಆಶಾಗಳು ನಿಮ್ಮಲ್ಲಿ ಉಪಕಾರ ಕೇಳುತ್ತಿಲ್ಲ. ಜನರ ಆರೋಗ್ಯಕ್ಕಾಗಿ ದುಡಿಯುವ ತಮ್ಮ ಸೇವೆಗೆ ನ್ಯಾಯ ಕೇಳುತ್ತಿದ್ದಾರೆ. ಅವರ ಪ್ರತಿಭಟನೆಯನ್ನು ಇನ್ನೆಷ್ಟು ದಿನ ನಿರ್ಲಕ್ಷಿಸುತ್ತೀರಿ?’ ಎಂದು ಅಶೋಕ್ ಕೇಳಿದ್ದಾರೆ.






