‘ಬಿಜೆಪಿಯಿಂದ ಉಚ್ಛಾಟನೆ’ ನನ್ನ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರದು : ಶಾಸಕ ಎಸ್.ಟಿ.ಸೋಮಶೇಖರ್

ಎಸ್.ಟಿ.ಸೋಮಶೇಖರ್
ಬೆಂಗಳೂರು : 2028ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕೆಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಕ್ಷೇತ್ರದ ಜನತೆ ಹಾಗೂ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದು, ನನ್ನ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಹೈಕಮಾಂಡ್ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಮೂಲಕ ಒಳ್ಳೆ ನಿರ್ಧಾರ ತೆಗೆದುಕೊಂಡಿದೆ. ಅದನ್ನು ನಾನು ಸ್ವಾಗತಿಸುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ನಾನು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ನಾನು ಬಿಜೆಪಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೆ’ ಎಂದು ವಿವರಣೆ ನೀಡಿದರು.
2023ರ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಿಜೆಪಿಯಲ್ಲಿನ ಕೆಲ ಮುಖಂಡರು ತೀವ್ರ ವಿರೋಧ ಮಾಡಿದರು. ಇದೇ ಕಾರಣಕ್ಕೆ ನಾನು ಬಿಜೆಪಿ ಪಕ್ಷದೊಂದಿಗೆ ಮುನಿಸಿಕೊಂಡಿದ್ದು. ಈ ಸಂಬಂಧ ಹೈಕಮಾಂಡ್ಗೂ ದೂರು ನೀಡಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ, ಹೀಗಾಗಿ ಪಕ್ಷದಿಂದ ದೂರ ಉಳಿದೆ ಎಂದು ಸೋಮಶೇಖರ್ ತಿಳಿಸಿದರು.
ಬಿಜೆಪಿಯಲ್ಲಿ ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಅಲ್ಲದೆ, ಪಕ್ಷಕ್ಕೆ ಚ್ಯುತಿಯಾಗದಂತೆ ನಡೆದುಕೊಂಡಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ ಜತೆಗೆ ಆರೇಳು ಜಿಲ್ಲೆಗಳಲ್ಲಿ ಪ್ರಚಾರ ಮಾಡಿ ಪಕ್ಷದ ಪ್ರಚಾರ ನಡೆಸಿದ್ದೇನೆ. ಆದರೆ, 25-30 ವರ್ಷದಿಂದ ರಾಜಕೀಯದಲ್ಲಿರುವ ನನಗೆ ತೊಂದರೆಯಾದರೆ ಕ್ರಮ ಕೈಗೊಳ್ಳಲಿಲ್ಲ. ನಾನು ಇವರನ್ನು ಹೋಗಿ ಭಿಕ್ಷೆ ಬೇಡಲು ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರಕಾರದಲ್ಲಿಯೂ ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣಕ್ಕೆ ಹೊರ ಬಂದಿದ್ದು. ಅವರಿಗೆ ನಮಗೆ ಅಗತ್ಯವಿಲ್ಲ ಎಂಬುದು ನನ್ನ ಭಾವನೆ. ಹೀಗಾಗಿ ಉಚ್ಛಾಟನೆ ಮಾಡಿದ್ದಾರೆ, ಒಳ್ಳೆಯದು. ಕ್ಷೇತ್ರದ ಅಭಿವೃದ್ಧಿ ನನ್ನ ಆದ್ಯತೆ. ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೇಂದ್ರ ಸಚಿವರು ಎಲ್ಲರನ್ನು ಯಾವುದೇ ಭಿನ್ನ-ಬೇಧವಿಲ್ಲದೆ ನಾನು ಎಲ್ಲರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ ಎಂದು ಸೋಮಶೇಖರ್ ಹೇಳಿದರು.







