‘ಪ್ರಧಾನಿ ಮೋದಿ 10 ವರ್ಷಗಳಿಂದ ಪತ್ರಿಕಾಗೋಷ್ಠಿ ನಡೆಸಿಲ್ಲ ಏಕೆ?’ ಎಂದು ಪ್ರಶ್ನಿಸಿದ ವಿದ್ಯಾರ್ಥಿ; ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆಯೇನು?

Photo | thenewsminute
ಬೆಂಗಳೂರು, ಜೂ. 21: ‘ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ನಿಮ್ಮ ನಿಲುವೇನು?’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಯುಗದಲ್ಲಿ ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳು ‘ಅನಗತ್ಯ’ವಾಗಿವೆ ಎಂದು ಹೇಳಿದ್ದಾರೆ.
ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ತೇಜಸ್ವಿ ಸೂರ್ಯ, ‘ಇದು ಚರ್ಚೆಯನ್ನು ಆರಂಭಿಸಲು ಉತ್ತಮ ಪ್ರಶ್ನೆ’ ಎಂದು ಹೇಳಿ, ಡಿಜಿಟಲ್ ಯುಗದಲ್ಲಿ ಪತ್ರಿಕಾಗೋಷ್ಠಿಗಳ ಪ್ರಸ್ತುತತೆ ಕುರಿತು ತಮ್ಮ ಅಭಿಪ್ರಾಯವನ್ನು ವಿವರಿಸಿದರು.
‘24x7 ಸಾಮಾಜಿಕ ಮಾಧ್ಯಮದ ಯುಗದಲ್ಲಿ ನಾಯಕರು ಜನರೊಂದಿಗೆ ನೇರವಾಗಿ ಮಾತನಾಡಬಹುದು. ಪತ್ರಿಕಾಗೋಷ್ಠಿಯ ಉದ್ದೇಶವೆಂದರೆ ನಾಯಕ ಮತ್ತು ಜನರ ನಡುವೆ ಮಾಧ್ಯಮವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದು. ಈಗ ಅದರ ಅಗತ್ಯ ಕಡಿಮೆಯಾಗಿದೆ’ ಎಂದು ಹೇಳಿದರು.
‘ಪ್ರಧಾನಿ ಸಂವಹನ ನಡೆಸುತ್ತಿಲ್ಲ ಎಂದಲ್ಲ. ಅವರು ಪ್ರತಿದಿನ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ’ ಎಂದೂ ಅವರು ಹೇಳಿದರು.
ಈ ಸಂವಾದದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೇಜಸ್ವಿ ಸೂರ್ಯ ಅವರ ಹೇಳಿಕೆಗಳು ಚರ್ಚೆಗೆ ಕಾರಣವಾಗಿವೆ.
ಜೂನ್ 18ರಂದು ನಡೆದ ಕಾರ್ಯಕ್ರಮದ ಛಾಯಾಚಿತ್ರಗಳನ್ನು ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ದೇಶದ ಪ್ರಗತಿಗೆ ಕೊಡುಗೆ ನೀಡುವ ಯುವಜನರಲ್ಲಿ ‘ಗಮನಾರ್ಹ ಉದ್ದೇಶ, ಮಹತ್ವಾಕಾಂಕ್ಷೆ ಮತ್ತು ಸಂಕಲ್ಪ’ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೇ 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಯಾವುದೇ ಔಪಚಾರಿಕ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಆದರೆ ವಿವಿಧ ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದಾರೆ.
ಮೇ 2026ರಲ್ಲಿ ನಾರ್ವೆಯ ಓಸ್ಲೊದಲ್ಲಿ ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರೊಂದಿಗೆ ನಡೆದ ಜಂಟಿ ಮಾಧ್ಯಮ ಹೇಳಿಕೆ ಕಾರ್ಯಕ್ರಮದಲ್ಲೂ ಮೋದಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ. ಈ ವೇಳೆ ನಾರ್ವೇಝಿಯನ್ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ ಅವರು ಪ್ರಶ್ನೆ ಕೇಳಿದರೂ ಪ್ರತಿಕ್ರಿಯೆ ದೊರೆತಿರಲಿಲ್ಲ.
ಆದರೆ, ಅದು ಮುಕ್ತ ಪತ್ರಿಕಾಗೋಷ್ಠಿಯಲ್ಲ; ಪೂರ್ವನಿಯೋಜಿತ ಜಂಟಿ ಮಾಧ್ಯಮ ಹೇಳಿಕೆ ಕಾರ್ಯಕ್ರಮವಾಗಿತ್ತು. ಇಂತಹ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ನಾಯಕರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಲ್ಲ ಎಂದು ಭಾರತೀಯ ಅಧಿಕಾರಿಗಳು ಬಳಿಕ ಸ್ಪಷ್ಟಪಡಿಸಿದ್ದರು.
Gen Z stumped cerelac baby Tejasvi Surya!
— Supriya Shrinate (@SupriyaShrinate) June 20, 2026
A simple question was asked: “Why is our Honorable PM not attending any Press conferences in over 10 years”
🤐🤐🤐🤐 pic.twitter.com/Dfx5FSC0lE






