ವಿದ್ಯಾರ್ಥಿ ಸಂಘ ಚುನಾವಣೆ: ಅಧ್ಯಯನ ಸಮಿತಿ ರಚಿಸಿದ ಕೆಪಿಸಿಸಿ

ಬೆಂಗಳೂರು, ಡಿ. 28: ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು, ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸುವ ದೃಷ್ಟಿಯಿಂದ ಚುನಾವಣೆ ಪ್ರಕ್ರಿಯೆ, ರೂಪು-ರೇಷೆ ಕುರಿತು ಅಧ್ಯಯನ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಉನ್ನತ ಮಟ್ಟದ ಸಮಿತಿ ರಚಿಸಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸಮಿತಿ ಸಂಚಾಲಕರು, ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಬೇಕು ಎಂಬ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಈ ಸಮಿತಿ ರಚನೆ ಮಾಡಿದ್ದಾರೆ.
ಈ ಸಮಿತಿಗೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಸಂಚಾಲಕರಾಗಿ ನೇಮಕಗೊಂಡಿದ್ದಾರೆ.
ಉಳಿದಂತೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಬಿ. ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಬಸವನಗೌಡ ಬಾದರ್ಲಿ ಹಾಗೂ ಎಚ್.ಎಸ್. ಮಂಜುನಾಥ್, ಕೀರ್ತೀ ಗಣೇಶ್ ಈ ಸಮಿತಿಯಲ್ಲಿ ಇದ್ದಾರೆ.
ವಿದ್ಯಾರ್ಥಿ ಚುನಾವಣೆಯನ್ನು ಯಾವ ಹಂತದಲ್ಲಿ ನಡೆಸಬಹುದು, ಸಾಧಕ-ಬಾಧಕ, ಚುನಾವಣೆ ಪ್ರಕ್ರಿಯೆ, ವ್ಯವಸ್ಥೆ, ಪಾರದರ್ಶಕತೆ, ರಾಜಕೀಯೇತರ ರೀತಿಯಲ್ಲಿ ಚುನಾವಣೆ ನಡೆಸಬೇಕೇ ಎಂಬುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿಗೆ ಸ್ಪಷ್ಟಪಡಿಸಲಾಗಿದೆ.
ಸಮಿತಿ ರಚನೆಯಾದ ಹದಿನೈದು ದಿನಗಳ ಒಳಗಾಗಿ ಸಮಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.







