ಹಣಕಾಸು ಯೋಜನೆಗಳ ಪ್ರಚಾರಕ್ಕೆ ತಮ್ಮ ಭಾವಚಿತ್ರ, ಧ್ವನಿಯ ದುರ್ಬಳಕೆ: ನಕಲಿ ವಿಡಿಯೊಗಳ ಬಗ್ಗೆ ಸುಧಾಮೂರ್ತಿ ಎಚ್ಚರಿಕೆ

ಸುಧಾಮೂರ್ತಿ | Photo Credit: PTI
ಬೆಂಗಳೂರು: ಹಣಕಾಸು ಯೋಜನೆಗಳು ಹಾಗೂ ಹೂಡಿಕೆಗಳನ್ನು ಪ್ರಚಾರ ಮಾಡಲು ತಮ್ಮ ಭಾವಚಿತ್ರ ಹಾಗೂ ಧ್ವನಿಯನ್ನು ದುರ್ಬಳಕೆ ಮಾಡುತ್ತಿರುವ ನಕಲಿ ವಿಡಿಯೊಗಳ ಬಗ್ಗೆ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ನನ್ನ ಅರಿವು ಅಥವಾ ಒಪ್ಪಿಗೆ ಇಲ್ಲದೆ ಈ ಡೀಪ್ಫೇಕ್ ವಿಡಿಯೊಗಳನ್ನು ನಿರ್ಮಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುಧಾಮೂರ್ತಿ, “ಹಣಕಾಸು ಯೋಜನೆಗಳು ಹಾಗೂ ಹೂಡಿಕೆಗಳನ್ನು ಪ್ರಚಾರ ಮಾಡಲು ನನ್ನ ಭಾವಚಿತ್ರ ಹಾಗೂ ಧ್ವನಿಯನ್ನು ದುರ್ಬಳಕೆ ಮಾಡಿಕೊಂಡು ಆನ್ಲೈನ್ನಲ್ಲಿ ಹಂಚಲಾಗುತ್ತಿರುವ ನಕಲಿ ವಿಡಿಯೊಗಳ ಬಗ್ಗೆ ನಾನು ನಿಮ್ಮನ್ನು ಎಚ್ಚರಿಸಲು ಬಯಸುತ್ತೇನೆ. ಇವು ನನ್ನ ಅರಿವು ಅಥವಾ ಒಪ್ಪಿಗೆ ಇಲ್ಲದೆ ನಿರ್ಮಿಸಲಾದ ಡೀಪ್ಫೇಕ್ ವಿಡಿಯೊಗಳಾಗಿವೆ” ಎಂದು ತಿಳಿಸಿದ್ದಾರೆ.
“ವಂಚಕ ವಿಡಿಯೊಗಳನ್ನು ಆಧರಿಸಿ ಯಾವುದೇ ಹಣಕಾಸು ನಿರ್ಧಾರಗಳನ್ನು ಕೈಗೊಳ್ಳಬೇಡಿ. ಇಂತಹ ಮಾಹಿತಿಗಳನ್ನು ಅಧಿಕೃತ ಮಾರ್ಗಗಳ ಮೂಲಕ ಪರಿಶೀಲಿಸಿಕೊಳ್ಳಿ. ಇಂತಹ ತುಣುಕುಗಳು ನಿಮ್ಮ ಗಮನಕ್ಕೆ ಬಂದಾಗ ಅವುಗಳನ್ನು ವರದಿ ಮಾಡಿ. ಜಾಗೃತರಾಗಿರಿ, ಸುರಕ್ಷಿತರಾಗಿರಿ. ಜೈಹಿಂದ್!” ಎಂದು ಅವರು ಮನವಿ ಮಾಡಿದ್ದಾರೆ.
ತಾವು ಮೂರ್ತಿ ಟ್ರಸ್ಟ್ನ ಅಧ್ಯಕ್ಷೆಯಾಗಿರುವ ಕಾರಣ, ನಿಯಮದ ಪ್ರಕಾರ ಯಾವುದೇ ಹೂಡಿಕೆಗಳು ಅಥವಾ ಹಣಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತು ಮಾತನಾಡಲು ಅವಕಾಶವಿಲ್ಲ ಎಂದೂ ಅವರು ತಿಳಿಸಿದ್ದಾರೆ.
“ನೀವು ಫೇಸ್ಬುಕ್ ನೋಡಿದಾಗ, ಅದರಲ್ಲಿ ನನ್ನ ಒಂದರಿಂದ ಮೂರು ವಿಡಿಯೊಗಳು ಏಕಕಾಲಕ್ಕೆ ಪ್ರಸಾರವಾಗುತ್ತಿರುವುದನ್ನು ಕಂಡು ನಿಜವಾಗಿಯೂ ಆತಂಕ ಮತ್ತು ನೋವು ಆಗುತ್ತಿದೆ. ಅದರಲ್ಲಿ 200 ಡಾಲರ್ ಅಥವಾ 20,000 ರೂ. ಹೂಡಿಕೆ ಮಾಡಿದರೆ, ಅದಕ್ಕಿಂತಲೂ ಅಥವಾ ಬಹುಶಃ ಹತ್ತು ಪಟ್ಟು ಹೆಚ್ಚು ಹಣ ಪಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ನಕಲಿ ಸುದ್ದಿಗಳು ಹರಡುತ್ತಿವೆ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹಲವರು ನಷ್ಟ ಅನುಭವಿಸಿರುವ ವಿಷಯ ನನಗೆ ತಿಳಿದಿದೆ. ಆದ್ದರಿಂದ ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಸಂದೇಶಗಳನ್ನು ನಂಬಬೇಡಿ ಎಂದು ಸುಧಾಮೂರ್ತಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ, “ನನ್ನ ಹೆಸರಿನಲ್ಲಿ ಬರುವ ಯಾವುದೇ ಹಣಕಾಸು ವಹಿವಾಟುಗಳನ್ನು ನಂಬಬಾರದು ಎಂದು ಎಲ್ಲ ವೀಕ್ಷಕರಲ್ಲೂ ಕೈಮುಗಿದು ಬೇಡಿಕೊಳ್ಳುತ್ತೇನೆ. ಇದು ಸಂಪೂರ್ಣ ನಕಲಿ ಸುದ್ದಿ. ದುರಾಸೆಯಿಂದ ನಿಮ್ಮ ಕಠಿಣ ದುಡಿಮೆಯ ಹಣವನ್ನು ಕಳೆದುಕೊಳ್ಳಬೇಡಿ. ನಕಲಿ ಸುದ್ದಿಯನ್ನು ಬಲೆಯಂತೆ ಹಾಕಿ ನಿಮ್ಮನ್ನು ಒಳಗೆಳೆದುಕೊಳ್ಳುತ್ತಾರೆ. ಅದಕ್ಕೆ ಬಲಿಯಾಗಬೇಡಿ” ಎಂದು ಅವರು ಕಿವಿಮಾತು ಹೇಳಿದ್ದಾರೆ.







