‘ಸಮೀಕ್ಷೆ’ಯಲ್ಲಿ ಭಾಗವಹಿಸಲು ನಿರಾಕರಿಸಿದ ಸುಧಾಮೂರ್ತಿ; ಸಚಿವರು ಹೇಳಿದ್ದೇನು?

ಸುಧಾಮೂರ್ತಿ
ಬೆಂಗಳೂರು, ಅ.16: ಸುಧಾಮೂರ್ತಿ ಕುಟುಂಬವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿರುವುದಕ್ಕೆ ಸಚಿವರಾದ ಶಿವರಾಜ್ ತಂಗಡಗಿ, ಸಂತೋಷ್ ಲಾಡ್ ಮತ್ತು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಸಂಸದ ತೇಜಸ್ವಿ ಸೂರ್ಯ ಹೇಳುವುದು ನೋಡಿದರೆ, ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಎಷ್ಟು ಕಾಳಜಿ ಎಂಬುದು ಗೊತ್ತಾಗುತ್ತಿದೆ. ಸುಧಾಮೂರ್ತಿಯವರ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ, ಅವರ ಮನಸ್ಥಿತಿ ನೋಡಿದರೆ ನನಗೆ ಬೇಸರ ಆಗುತ್ತದೆ ಎಂದರು.
ರಾಜ್ಯಸಭೆ, ಲೋಕಸಭೆ ಸದಸ್ಯರಾಗಿ ಅವರ ಮನಸ್ಥಿತಿಯು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕೇಂದ್ರ ಸರಕಾರ ಜಾತಿಗಣತಿ ಮಾಡುತ್ತದೆ. ಆಗಲೂ ಇವರು ಹಾಗೆಯೇ ಹೇಳುತ್ತಾರೆಯೇ? ನಾವು ಅವರ ವೈಯುಕ್ತಿಕ ವಿವರ ಕೇಳುತ್ತಿಲ್ಲ. ಅವರ ಬಂಗಾರ, ಬೆಳ್ಳಿ ಬಗ್ಗೆ ಕೇಳುತ್ತಿಲ್ಲ. ತುಳಿತಕ್ಕೊಳಗಾದವರಿಗೆ ಮನೆ ಇಲ್ಲ. ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದಾರೆ. ಅವರ ಮಾಹಿತಿ ಗೊತ್ತಾದರೆ, ಸೌಲಭ್ಯ ನೀಡಬಹುದು. ಅದಕ್ಕೆ ನಾವು ಸಮೀಕ್ಷೆ ಮಾಡುತ್ತಿರುವುದು ಎಂದು ಸಚಿವರು ತಿಳಿಸಿದರು.
ಈ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಸುಧಾಮೂರ್ತಿ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ಅವರು ಶ್ರೀಮಂತರಾಗಿದ್ದಾರೆ. ಈಗಾಗಲೇ ಶೇ.90 ಸರ್ವೆ ಆಗಿದೆ. ಅವರ ಬಗ್ಗೆ ನಮಗೆ ಬಹಳ ಗೌರವ ಇದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ ಕೊಟ್ಟರು. ಆಗ ಸುಧಾಮೂರ್ತಿಯವರು ಏಕೆ ಮಾತನಾಡಲಿಲ್ಲ? ಕೇಂದ್ರದ ಜಾತಿಗಣತಿಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಸುಧಾಮೂರ್ತಿ ಅವರು ಮಾಡಿದ್ದು ತಪ್ಪು. ಅವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಅವರು ಹಿಂಬರಹ ಕೊಟ್ಟಿರುವುದು ತಪ್ಪು. ಎಲ್ಲರೂ ಸುಧಾಮೂರ್ತಿಯವರನ್ನು ಪ್ರೇರಣೆ ರೀತಿಯಲ್ಲಿ ನೋಡುತ್ತಾರೆ. ಮುಂದೆ ಕೇಂದ್ರ ಸರಕಾರ ಜಾತಿ ಗಣತಿ ಮಾಡುವಾಗಲೂ, ಈ ರೀತಿ ಹಿಂಬರಹ ಕೊಡುತ್ತಾರಾ ಎಂದು ಟೀಕಿಸಿದರು.







