ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ BJP ಟಿಕೆಟ್ ಘೋಷಿಸಬೇಕು: ಮಾಜಿ ಸಚಿವ ನಾರಾಯಣಗೌಡ ಒತ್ತಾಯ
ʼʼಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕ್ರಮ ಸರಿಯಿಲ್ಲʼʼ

ಮಂಡ್ಯ, ಅ.11: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ರಮವು ಸರಿಯಲ್ಲ ಎಂದು ಮಾಜಿ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.
ಬುಧವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ತನ್ನ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಪ್ರಭಲವಾದ ವಿರೋಧಿಯೆಂದರೆ ಜೆಡಿಎಸ್ ಪಕ್ಷ. ಆದ್ದರಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ತೀರ್ಮಾನವನ್ನು ಪರಿಶೀಲನೆ ಮಾಡಬೇಕು ಎಂದು ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಲು ನಾನೂ ಸೇರಿದಂತೆ 17 ಶಾಸಕರು ಕಾರಣರಾಗಿದ್ದೇವೆ. ಕಳೆದ ಲೋಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಎಂಟು ಸ್ಥಾನಗಳಲ್ಲಿಯೂ ಜೆಡಿಎಸ್ ಶಾಸಕರಿದ್ದರೂ ಜೆಡಿಎಸ್ ಕಾಂಗ್ರೇಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮಂಡ್ಯ ಜಿಲ್ಲೆಯ ಸೊಸೆಯಾಗಿದ್ದ ಸ್ವಾಭಿಮಾನಿ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದರು.
ಪ್ರಸ್ತುತ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ್ದರೂ ಲೋಕಸಭೆ ಚುನಾವಣೆಯ ವಿಚಾರ ಬಂದಾಗ ಪ್ರಜ್ಞಾವಂತ ಮತದಾರರು ನರೇಂದ್ರಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಲಿದ್ದಾರೆ. ಹಾಗಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಸುಮಲತಾ ಅಂಬರೀಶ್ ಮಾತನಾಡಿ, ಕಾವೇರಿ ವಿಚಾರದಲ್ಲಿ ನಮ್ಮ ರಾಜ್ಯ ಸರಕಾರ ಸುಪ್ರೀಂಕೋರ್ಟ್, ಪ್ರಾಧಿಕಾರದ ಮುಂದೆ ವಾಸ್ತವ ಪರಿಸ್ಥಿತಿ ಮಂಡಿಸಲು ವಿಫಲವಾಗಿದೆ. ವಿವಾದವನ್ನು ಸೌಹಾರ್ದಯುತ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂದರು.
ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಿ ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಅದಕ್ಕೆ ಕಾನೂನು ತೊಡಕಿದೆ. ಇದು ಕಾಂಗ್ರೇಸ್ ನಾಯಕರಿಗೂ ಗೊತ್ತಿದೆಯಾದರೂ ಸುಖಾಸುಮ್ಮನೆ ವಿತಂಡವಾದ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
“ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಗ್ಗೆ ಮೇಲ್ಮಟ್ಟದಲ್ಲಿ ಮಾತುಕತೆಯಾಗಿದ್ದರೂ ಸ್ಥಾನಗಳ ಹೊಂದಾಣಿಕೆ ಇನ್ನೂ ಅಂತಿಮವಾಗಿಲ್ಲ. ನಾನು ಬಿಜೆಪಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬ ಬಯಕೆ ಹೊಂದಿದ್ದೇನೆ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆಯಿಂದ ರಾಜ್ಯದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜನತೆ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದು ಬಯಸಿದ್ದಾರೆ.”
-ಸುಮಲತಾ ಅಂಬರೀಶ್, ಸಂಸದೆ.







