‘ಸು ಫ್ರಮ್ ಸೋ’ ಅಲ್ಲ, ಇದು ‘ಬಿ ಫ್ರಮ್ ಸಿ’: ರಾಜ್ಯ ಸರಕಾರದ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

ಬೆಂಗಳೂರು: ‘ರಾಜ್ಯದಲ್ಲಿ ಇತ್ತೀಚೆಗೆ ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ಆಗಿತ್ತು. ಆ ಹೆಸರಿನ ರೀತಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ‘ಬಿ ಫ್ರಮ್ ಸಿ’ ಸರಕಾರ ಆಗಿದೆ. ಎಂದರೆ ಭೋಗಸ್ ಕಾಂಗ್ರೆಸ್ ಸರಕಾರ’ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯ ವಿಚಾರದ ಬಗ್ಗೆ ಮಾತನಾಡಿದ ಅವರು, ‘ಸಿಎಜಿ ವರದಿಯಲ್ಲಿ ಯಾವುದಕ್ಕೆ ಆದ್ಯತೆ ಕೊಡಬೇಕೋ ಎಂಬುದನ್ನು ಈ ಸರಕಾರ ಅರ್ಥ ಮಾಡಿಕೊಳ್ಳದೇ, ದೂರದೃಷ್ಟಿ ಕೊರತೆಯಿಂದಾಗಿ ಅಭಿವೃದ್ಧಿಗೆ ಅನುದಾನವನ್ನೇ ನೀಡಿಲ್ಲ ಎಂದು ಈ ಸರಕಾರದ ಆರ್ಥಿಕ ಸ್ಥಿತಿ ಉಲ್ಲೇಖ ಮಾಡಿದೆ’ ಎಂದು ಪ್ರಸ್ತಾಪಿಸಿದರು.
ಇಲ್ಲಗಳ ಸರಕಾರ: ಈ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಂದು ರಸ್ತೆ, ಸೇತುವೆ, ಹೊಸ ಅಂಗನವಾಡಿ ಕಟ್ಟಡ, ಶಾಲೆ-ಕಾಲೇಜುಗಳಿಗೆ ಕಟ್ಟಡ, ಬಡವರಿಗೆ ಮನೆ ಸೇರಿದಂತೆ ಯಾವುದನ್ನು ನೀಡಿಲ್ಲ. ಹೀಗಾಗಿ ಇದು ಒಂದು ರೀತಿಯಲ್ಲಿ ‘ಇಲ್ಲಗಳ ಸರಕಾರ’. ಈ ಮುಖ್ಯಮಂತ್ರಿ ಇರುವಾಗಲೇ ಶಾಸಕರಿಗೆ ಅನುದಾನ ಕೊಡುತ್ತೀರೋ ಅಥವಾ ನವೆಂಬರ್ ನಂತರ ಬರುವ ಸಿಎಂ ಅನುದಾನ ಕೊಡಿಸುತ್ತೀರೋ?’ ಎಂದು ಸುನೀಲ್ ಕುಮಾರ್ ಕೇಳಿದರು.
‘ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಒಂದು ಪುಟ್ಟಿ ಮಣ್ಣು ಹಾಕಲು ಈ ಸರಕಾರ ಹಣವನ್ನು ನೀಡಿಲ್ಲ. ಶಾಸಕರು ತಮ್ಮ ಕ್ಷೇತ್ರದಲ್ಲಿ ತಿರುಗಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಅನುದಾನ ಕೊಟ್ಟು, ಇತರ ಯೋಜನೆಗಳಿಗೆ ಅನುದಾನ ಕೊಡದೆ ಇದ್ದರೆ ಹೇಗೆ?’ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ವಸತಿ ಇಲಾಖೆ ಮುಚ್ಚಿಬಿಡಿ: ‘ಆಡಳಿತ ಪಕ್ಷದ ಶಾಸಕರೇ ಅನುದಾನದ ಬಗ್ಗೆ ಪ್ರಶ್ನೆ ಮಾಡಿದರೆ ಅವರಿಗೆ ನೋಟಿಸ್ ನೀಡಲಾಗುತ್ತಿದೆ. ಎರಡು ವರ್ಷದಲ್ಲಿ ಒಂದು ಮನೆ ಕೊಟ್ಟಿಲ್ಲ. ಹಾಗಾದರೆ ವಸತಿ ಇಲಾಖೆ ಏಕೆ ಬೇಕು. ಆ ಇಲಾಖೆಯನ್ನು ರದ್ದು ಮಾಡಿ. ನಿಗಮ ಮಂಡಳಿಗಳಿಗೆ ಸರಕಾರ ನ್ಯಾಯ ಒದಗಿಸಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.







