ಮುಂಬೈ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ. 27: ಮುಂಬೈ ಹಾಗೂ ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಓಡಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ತೇಜಸ್ವಿ ಸೂರ್ಯ, ‘ಬೆಂಗಳೂರು ಮತ್ತು ಮುಂಬೈ ಜನರಿಗೆ ನನ್ನಲ್ಲಿ ಒಂದು ಶುಭ ಸುದ್ದಿ ಇದೆ. 30 ವರ್ಷಗಳಿಂದ, ಎರಡು ಮಹಾನಗರಗಳನ್ನು ಒಂದೇ ಒಂದು ಸೂಪರ್ ಫಾಸ್ಟ್ ರೈಲು-ಉದ್ಯಾನ್ ಎಕ್ಸ್ ಪ್ರೆಸ್ ಮೂಲಕ ಸಂಪರ್ಕಿಸಲಾಗುತ್ತಿತ್ತು. ಆ ರೈಲು ತಲುಪಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.
ಇದರಿಂದಾಗಿ ಹೆಚ್ಚಿನ ಜನರು ಅನಿವಾರ್ಯವಾಗಿ ಬಸ್ ಅಥವಾ ವಿಮಾನಗಳನ್ನು ಬಳಸಬೇಕಾಗುತ್ತಿತ್ತು. ಪ್ರಯಾಣ ದುಬಾರಿಯೂ ಆಗಿತ್ತು. ಹೆಚ್ಚಿನ ರೈಲು ಸೇವೆಗಳನ್ನು ಪ್ರಾರಂಭಿಸಲು ಎರಡೂ ನಗರಗಳ ಜನರಿಂದ ನಿರಂತರ ಬೇಡಿಕೆ ಇತ್ತು. ನಾಲ್ಕು ವರ್ಷಗಳಲ್ಲಿ ನಾನು ಸಂಸತ್ತಿನಲ್ಲಿ, ಪಿಎಸಿ ಸಭೆಗಳಲ್ಲಿ, ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಮತ್ತು ರೈಲ್ವೆ ಸಚಿವರೊಂದಿಗೆ ಈ ವಿಷಯವನ್ನು ಹಲವು ಬಾರಿ ಎತ್ತಿದ್ದೆ. ಈ ಸಕಾರವಾಗಿದೆ ಎಂದು ಉಲ್ಲೇಖಿಸಿದ್ದಾರೆ.
‘ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ಆರ್ಥಿಕ ಕೇಂದ್ರಗಳು ಹಿಂದಿನಿಂದಲೂ ಒಂದಕ್ಕಿಂತ ಹೆಚ್ಚು ನೇರ ಸೂಪರ್ ಫಾಸ್ಟ್ ರೈಲುಗಳನ್ನು ಹೊಂದಿಲ್ಲ ಎಂಬುದು ದಿಗ್ಭ್ರಮೆಗೊಳಿಸುವ ಸಂಗತಿ. ಅಂತಿಮವಾಗಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರು ಮತ್ತು ಮುಂಬೈ ರೈಲು ನಿಲ್ದಾಣಗಳಲ್ಲಿ ಲೇನ್ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ಹೆಚ್ಚು ಸೂಪರ್ ಫಾಸ್ಟ್ ರೈಲುಗಳನ್ನು ಓಡಿಸಲು ನಿರ್ಧರಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.







