ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ; ರಾಜೇಗೌಡ ಅವರ ಶಾಸಕ ಸ್ಥಾನ ಮರುಸ್ಥಾಪನೆಗೆ ಆದೇಶ

ಚಿಕ್ಕಮಗಳೂರು, ಮೇ 11: ಶೃಂಗೇರಿ ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಟಿ.ಡಿ.ರಾಜೇಗೌಡ ಅವರ ಶಾಸಕತ್ವವನ್ನು ಮರು ಸ್ಥಾಪಿಸುವಂತೆ ಆದೇಶಿಸಿದೆ. ನ್ಯಾಯಾಧೀಶರಾದ ಸಂಜಯ್ ಕುಮಾರ್ ಮತ್ತು ವಿನೋದ್‌ಚಂದ್ರ ಅವರಿದ್ದ ಪೀಠ ಈ ಆದೇಶ ಹೊರಡಿಸಿದ್ದು ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಟಿ.ಡಿ.ರಾಜೇಗೌಡ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮುಂದುವರಿಯಲಿದ್ದಾರೆ.
ಮರುಮತ ಎಣಿಕೆ ಸಂದರ್ಭ ಅಂಚೆ ಮತಗಳಲ್ಲಿ ಅಕ್ರಮ ನಡೆದಿದೆ, ತಿರುಚಲಾಗಿದೆ ಎಂದು ಆರೋಪಿಸಿ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 9ರಂದು ಟಿ.ಡಿ.ರಾಜೇಗೌಡ ಅರ್ಜಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದ ಸುಪ್ರೀಂಕೊರ್ಟ್ ಮೇ 11ರಂದು ವಿಚಾರಣೆ ನಡೆಸುವುದಾಗಿ ಹೇಳಿತ್ತು. ಅದರಂತೆ ಮೇ 11ರಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸದ್ಯ ಟಿ.ಡಿ.ರಾಜೇಗೌಡ ಶೃಂಗೇರಿ ಕ್ಷೇತ್ರದ ಶಾಸಕರಾಗಿ ಮತ್ತೆ ಮುಂದುವರಿಯಲಿದ್ದಾರೆ.
ಆದೇಶದ ಸಂದರ್ಭ ನ್ಯಾಯಪೀಠವು ಪೀಠ ಬಿಜೆಪಿ ಅಭ್ಯರ್ಥಿಯ ವಿರುದ್ಧ ಕೆಲವು ಕಟುವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ‘‘ಪ್ರಜಾಪ್ರಭುತ್ವವನ್ನು ಈ ರೀತಿ ಹೈಜಾಕ್ ಮಾಡಲು ನಾವು ನಿಮಗೆ ಅವಕಾಶ ನೀಡುವುದಿಲ್ಲ’’ ಎಂದು ಹೇಳಿದೆ.
ಮೇ 2ರಂದು ನಡೆದ ಅಂಚೆ ಮತಗಳ ಮರು ಎಣಿಕೆ ಸಂದರ್ಭದಲ್ಲಿ 2023ರಲ್ಲಿ ಸಿಂಧುವಾಗಿದ್ದ ಅಂಚೆ ಮತಗಳು ಅಸಿಂಧುವಾಗಿದ್ದವು. ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ 52 ಮತಗಳ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಅವರನ್ನು ಶೃಂಗೇರಿ ಕ್ಷೇತ್ರದ ಶಾಸಕರನ್ನಾಗಿ ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಡಿ.ಎನ್.ಜೀವರಾಜ್ ವಿಧಾನಸಭೆ ಸ್ವೀಕರ್ ಎದುರು ಇತ್ತೀಚೆಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
2023ರಲ್ಲಿ ನಡೆದ ಚುನಾವಣೆಯ ಅಂಚೆ ಮತಗಳಲ್ಲಿ ಅಕ್ರಮ ನಡೆದಿದೆ. ಅಂದು ಸಿಂಧುವಾಗಿದ್ದ ಅಂಚೆ ಮತಗಳು ಮರು ಮತ ಎಣಿಕೆ ಸಂದರ್ಭದಲ್ಲಿ ಅಸಿಂಧು ಆಗಿದೆ. ಮತ ಪತ್ರಗಳಿದ್ದ ಕವರ್‌ಗಳ ಸೀಲ್ ಒಡೆದಿದೆ. ಮತಪತ್ರಗಳಿದ್ದ ಬಾಕ್ಸ್ ಗಳ ಬೀಗ ಒಡೆದು ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಟಿ.ಡಿ. ರಾಜೇಗೌಡ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಜತೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಚಿಕ್ಕಮಗಳೂರು ಪೊಲೀಸರಿಗೆ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳಿ ದಾಖಲಿಸಿದ್ದ ದೂರಿನ ಮೇರೆಗೆ ಜೀವರಾಜ್, ಹಿಂದೆ ಚುನಾವಣಾಧಿಕಾರಿಯಾಗಿದ್ದ ವೇದಮೂರ್ತಿ ಹಾಗೂ ಹಿಂದಿನ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಎಫ್‌ಐಆರ್‌ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಟಿ.ಡಿ.ರಾಜೇಗೌಡ ಅವರ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
2023ರ ಶೃಂಗೇರಿ ವಿಧಾನಸಭೆ ಚುನಾವಣೆ ಮತ ಎಣಿಕೆ ವೇಳೆ ಕಾಂಗ್ರೆಸ್‌ನ ರಾಜೇಗೌಡ 201 ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಈ ವೇಳೆ ಅಂಚೆ ಮತಗಳ ಪೈಕಿ ತಿರಸ್ಕೃತ ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅಂಚೆ ಮತಗಳ ಮರು ಎಣಿಕೆಗೆ ಹೈಕೋರ್ಟ್ ಆದೇಶಿತ್ತು. ಮೇ 3ರಂದು ಅಂಚೆ ಮತಗಳ ಮರು ಎಣಿಕೆ ನಡೆದಿದ್ದು, ಎಣಿಕೆ ವೇಳೆ ಬಿಜೆಪಿಯ ಜೀವರಾಜ್ ಅವರು ಕಾಂಗ್ರೆಸ್‌ನ ರಾಜೇಗೌಡ ಅವರಿಗಿಂತ 52 ಮತಗಳ ಮುನ್ನಡೆ ಸಾಧಿಸಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದರು.
ಪ್ರಮಾಣವಚನ ಸ್ವೀಕರಿಸಿ ಆರನೇ ದಿನಕ್ಕೆ ಶಾಸಕತ್ವ ಕಳೆದುಕೊಂಡ ಜೀವರಾಜ್ :
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಬಳಿಕ ಡಿ.ಎನ್.ಜೀವರಾಜ್ 52 ಮತಗಳ ಮುನ್ನಡೆ ಸಾಧಿಸಿದ್ದು, ಶೃಂಗೇರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಆಯೋಗ ಮೇ 4ರಂದು ಪ್ರಮಾಣ ಪತ್ರ ನೀಡಿತ್ತು. ಬಳಿಕ ಪ್ರಮಾಣವಚನ ವಿಳಂಬ ಧೋರಣೆ ಮಾಡಲಾಗುತ್ತಿದೆ ಎಂದು ಮೇ 5ರಂದು ರಾಜ್ಯಪಾಲರ ಬಳಿ ದೂರು ನೀಡಲಾಗಿತ್ತು. ನಂತರ (ಮೇ 6ರಂದು) ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಿದ್ದರು. ಆದರೆ ಪ್ರಮಾಣ ವಚನ ಬೋಧಿಸಿದ 6 ದಿನಗಳ ಅಂತರದಲ್ಲಿ ಜೀವರಾಜ್ ಅವರು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಮತ್ತೆ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಅಂಚೆ ಮತ ಎಣಿಕೆ ಸಂದರ್ಭದಲ್ಲಿ ಟಿ.ಡಿ.ರಾಜೇಗೌಡ ಅವರ ವಿರುದ್ಧ ಫಲಿತಾಂಶ ಬಂದಿದ್ದು, ಅಕ್ರಮ ನಡೆದಿದೆ ಎಂದು ಪೊಲೀಸ್ ಠಾಣೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಫಲಿತಾಂಶದ ವಿರುದ್ಧ ಟಿ.ಡಿ.ರಾಜೇಗೌಡ ಅವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇ 11ರಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ ಟಿ.ಡಿ.ರಾಜೇಗೌಡ ಶಾಸಕತ್ವ ಮರುಸ್ಥಾಪಿಸುವಂತೆ ಆದೇಶ ನೀಡಿ ಮುಂದಿನ ವಿಚಾರಣೆ ಮೇ 21ಕ್ಕೆ ಮುಂದೂಡಿದೆ.
ಸುಧೀರ್ ಕುಮಾರ್ ಮುರೊಳ್ಳಿ, ಕಾಂಗ್ರೆಸ್ ವಕ್ತಾರ






