ಪಾರಿವಾಳಗಳ ಹೆಚ್ಚಳದಿಂದ ಆರೋಗ್ಯ ಸಮಸ್ಯೆ; ಕ್ರಮ ಕೈಗೊಳ್ಳುವಂತೆ ಶಾಸಕ ಸುರೇಶ್ ಕುಮಾರ್ ಒತ್ತಾಯ

ಬೆಂಗಳೂರು : ನಗರದಲ್ಲಿ ಪಾರಿವಾಳಗಳ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದ್ದು, ಇದರಿಂದ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಈ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದಿರುವ ಅವರು, ನಗರದ ವಿವಿಧ ಉದ್ಯಾನವನಗಳಲ್ಲಿ ಮತ್ತು ಇನ್ನೂ ಕೆಲವು ಬಯಲು ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರವನ್ನು ನೀಡುವ ದಾನಿಗಳು ಕಾರ್ಯೋನ್ಮುಖರಾಗಿದ್ದಾರೆ. ಅವರ ಹೃದಯವಂತಿಕೆ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಆದರೆ, ಈ ಪಾರಿವಾಳಗಳ ಸಂಖ್ಯೆ ವಿಪರೀತ ಮಟ್ಟದಲ್ಲಿ ಹೆಚ್ಚಾಗುತ್ತಿರುವುದರಿಂದ ಜನರಿಗೆ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿವೆ. ಈ ಬಗ್ಗೆ ಅನೇಕ ವೈದ್ಯಕೀಯ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದರಿಂದ ದಿನನಿತ್ಯ ಉದ್ಯಾನವನಗಳಲ್ಲಿ ವಾಕಿಂಗ್ ಹೋಗುವವರು, ವ್ಯಾಯಾಮ ಮಾಡುವವರು ಸಹಜವಾಗಿ ಆತಂಕಕ್ಕೆ ಈಡಾಗಿದ್ದಾರೆ. ಈ ಬಗ್ಗೆ ನನಗೆ ಮನವಿಗಳನ್ನು ನೀಡಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ನಾಗರೀಕರ ಆರೋಗ್ಯಕ್ಕೆ ಹಾನಿ ಆಗದ ರೀತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಟ್ಟದಲ್ಲಿ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.







