ನಾಳೆ ಕಾಂಗ್ರೆಸ್ ಶಾಸಕರೊಂದಿಗೆ ಸುರ್ಜೇವಾಲ ಚರ್ಚೆ; ಅಸಮಾಧಾನ ಶಮನಗೊಳಿಸಲು ಹೈಕಮಾಂಡ್ ಮಧ್ಯಪ್ರವೇಶ

ರಣದೀಪ್ ಸುರ್ಜೇವಾಲ (PTI)
ಬೆಂಗಳೂರು: ರಾಜ್ಯ ಸರಕಾರವು ಎರಡು ವರ್ಷ ಪೂರೈಸಿರುವ ಬೆನ್ನಲ್ಲೆ ಆಡಳಿತ ಪಕ್ಷದ ಶಾಸಕರು, ಸಚಿವರೇ ಅಧಿಕಾರ ಹಂಚಿಕೆ, ಪವರ್ ಸೆಂಟರ್, ಸೆಪ್ಟಂಬರ್ ಕ್ರಾಂತಿ, ಮುಖ್ಯಮಂತ್ರಿ ಬದಲಾವಣೆಯ ವಿಚಾರಗಳನ್ನು ಚರ್ಚೆ ಮಾಡುವ ಮೂಲಕ ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು, ಆಡಳಿತ ಪಕ್ಷದ ಶಾಸಕರು ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ಆಗುವಂತೆ ಹೇಳಿಕೆಗಳನ್ನು ನೀಡುವುದಕ್ಕೆ ಅಂಕುಶ ಹಾಕುವಂತೆ ಸೂಚನೆ ನೀಡಿದ್ದರು. ಅದಾಗ್ಯೂ, ಕೆಲವು ಸಚಿವರು, ಶಾಸಕರು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ.
ಪಕ್ಷದ ಶಾಸಕರಲ್ಲಿರುವ ಅಸಮಾಧಾನದ ಬಗ್ಗೆ ಚರ್ಚೆ ಮಾಡಿ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಸೋಮವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಶಾಸಕರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಲಿದ್ದಾರೆ.
ರಣದೀಪ್ ಸಿಂಗ್ ಸುರ್ಜೇವಾಲ ಅವರ ಕಚೇರಿಯಿಂದಲೇ ನೇರವಾಗಿ ಶಾಸಕರಿಗೆ ಮಾಹಿತಿ ನೀಡಿ, ಅವರ ಕಾರ್ಯಕ್ರಮದ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ. ಸುರ್ಜೇವಾಲ ಭೇಟಿ ವೇಳೆ ಅಸಮಾಧಾನಿತ ಶಾಸಕರು, ತಮ್ಮ ಅಹವಾಲುಗಳನ್ನು ಅವರ ಮುಂದಿಡಲಿದ್ದಾರೆ.
ವಸತಿ ಇಲಾಖೆಯಲ್ಲಿ ಹಣ ಕೊಟ್ಟವರಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಹಿರಿಯ ಶಾಸಕ ಬಿ.ಆರ್.ಪಾಟೀಲ್, ಅಭಿವೃದ್ಧಿಗೆ ಅನುದಾನವೇ ಲಭ್ಯವಾಗುತ್ತಿಲ್ಲ ಎಂದು ದೂರಿದ್ದ ರಾಜು ಕಾಗೆ ಹಾಗೂ ಎನ್.ವೈ.ಗೋಪಾಲಕೃಷ್ಣ ಸೇರಿದಂತೆ ಇನ್ನಿತರ ಶಾಸಕರ ಜೊತೆ ಅವರು ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.







