ಅ.30ರ ವರೆಗೆ ಆನ್‍ಲೈನ್ ʼಸಮೀಕ್ಷೆʼಗೆ ಅವಕಾಶ; ನಾಳೆ ಸಂಜೆಯವರೆಗೆ ಸಮೀಕ್ಷಕರಾಗಿ ಶಿಕ್ಷಕರಿಂದ ಕಾರ್ಯ ನಿರ್ವಹಣೆ

ಸ
ಬೆಂಗಳೂರು, ಅ.18: ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಅ.19ರ ಸಂಜೆಯ ವರೆಗೆ ಶಿಕ್ಷಕರು ಸಮೀಕ್ಷೆ ಕಾರ್ಯನಿರ್ವಹಿಸುತ್ತಾರೆ. ನಂತರ ಅವರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆ ಮಾಡಲಾಗುವುದು. ಆದರೆ ಆನ್‍ಲೈನ್ ಮೂಲಕ ಅ.30ರ ವರೆಗೂ ಸಮೀಕ್ಷೆ ಮುಂದುವರೆಯುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ತಿಳಿಸಿದೆ.
ಶನಿವಾರ ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್ ಮಾಹಿತಿ ನೀಡಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಸಾರ್ವಜನಿಕರು ಆನ್‍ಲೈನ್ ಮೂಲಕ ಅ.30ರ ವರೆಗೂ ಸ್ವಯಂ ಪಾಲ್ಗೊಳಬಹುದು. ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಜಿಲ್ಲಾಧಿಕಾರಿಗಳ ಹಂತದಲ್ಲಿ ಬಾಕಿ ಇರುವ ಸಮೀಕ್ಷಾ ಕಾರ್ಯದ ಅಂತಿಮ ಚಟುವಟಿಕೆ ಬಗ್ಗೆ ಕ್ರಮವಹಿಸಲಿದ್ದಾರೆ ಎಂದರು.
ನೌಕರರ ಸಂಘ ಪತ್ರ: ಸಚಿವಾಲಯದ ನೌಕರರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಲು ಆದೇಶ ಹೊರಡಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಸರಕಾರ ಸಚಿವಾಲಯದ ನೌಕರರ ಸಂಘವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದೆ.
ಸಮೀಕ್ಷಕರಾಗಿ 1600ಕ್ಕೂ ಅಧಿಕ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು ವಿವಿಧ ಸವಾಲುಗಳ ನಡುವೆಯೂ ಗಣತಿ ಕೆಲಸವನ್ನು ಯಾವುದೇ ರಜೆ/ವಿಶ್ರಾಂತಿ ಪಡೆಯದೆ, ಬೆಂಗಳೂರಿನ ಪ್ರತಿ ಮನೆ ಮನೆಗಳಿಗೆ ತೆರಳಿ ನಿರಂತರ 15 ದಿನಗಳಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದೆ.
ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸದರಿ ಸಮೀಕ್ಷೆಯು ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲಿಯೂ ಅ.18ರಂದು ಮುಕ್ತಾಯ ಆಗಬೇಕಾಗಿರುತ್ತದೆ. ಆದರೆ, ಈ ಕುರಿತು ಅಧಿಕೃತ ಆದೇಶ ಇದುವರೆಗೂ ಆಗಿರುವುದಿಲ್ಲ. ಹೀಗಾಗಿ ಎಲ್ಲ ಸಚಿವಾಲಯದ ಅಧಿಕಾರಿ/ನೌಕರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಹೇಳಿದೆ.
ರಾಜ್ಯದಲ್ಲಿ ಒಟ್ಟು 5,29,63,614 ಸಮೀಕ್ಷೆ ಪೂರ್ಣಗೊಂಡಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ 96.35ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಇದುವರೆಗೆ 1,42,74,031 ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 17,84,312 ಮನೆಗಳ ಸಮೀಕ್ಷೆ ಮುಗಿದಿದ್ದು, ಶೇ.39.76 ಪ್ರಗತಿ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 55,17,989 ಜನರ ಸಮೀಕ್ಷೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ.







