ರಾಜ್ಯಾದ್ಯಂತ 6.13 ಕೋಟಿ ಜನರ ʼಸಮೀಕ್ಷೆʼ ಪೂರ್ಣ

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸೆ.22ರಿಂದ ರಾಜ್ಯದಲ್ಲಿರುವ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದ್ದು, ಇಲ್ಲಿಯ ವರೆಗೆ 6.13 ಕೋಟಿ ಜನರ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.
ಶುಕ್ರವಾರದಂದು ಆಯೋಗವು ಪ್ರಕಟನೆ ಹೊರಡಿಸಿದ್ದು, ರಾಜ್ಯದಲ್ಲಿ ಒಟ್ಟು 6,85,38,000 ಜನರನ್ನು ಸಮೀಕ್ಷೆಗೆ ಒಳಪಡಿಸಬೇಕಾಗಿದೆ. ಈಗ 6,13,83,908 ಜನರ ಸಮೀಕ್ಷೆ ಪೂರ್ಣಗೊಂಡಿದೆ. 4,22,258 ಕುಟುಂಬಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿವೆ ಎಂದು ಮಾಹಿತಿ ನೀಡಿದೆ.
ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ Online https://kscbcselfdeclaration.karnataka.gov.in ಲಿಂಕ್ ಮೂಲಕ ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ನ.10ರವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ.
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದವರು, ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಲಭ್ಯವಿಲ್ಲದವರೂ, ಈ ಅವಕಾಶವನ್ನು ಬಳಸಿಕೊಂಡು ಮಾಹಿತಿಯನ್ನು ದಾಖಲಿಸಬಹುದಾಗಿದೆ. ಸಮೀಕ್ಷೆಯಿಂದ ಸರಕಾರದ ನೀತಿಗಳನ್ನು ಹಾಗೂ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವ ಕಾರಣ ಸ್ವಯಂ ದೃಢೀಕರಣದ ಮೂಲಕ ಎಲ್ಲಾ ನಾಗರಿಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.







