‘ಸದನ’ದಲ್ಲಿ ಚಿಕ್ಕ ವಿಷಯಕ್ಕೆ ಅಮಾನತು ಅಕ್ಷಮ್ಯ: ಮಾಜಿ ಸ್ಪೀಕರ್ ಕಾಗೇರಿ
ಬೆಂಗಳೂರು, ಜು.3: ‘ವಿಧಾನಸಭೆಯ ಅಧಿವೇಶನದಲ್ಲಿ ಚಿಕ್ಕ ವಿಷಯವನ್ನೇ ದೊಡ್ಡ ವಿಷಯವನ್ನಾಗಿ ಬಿಂಬಿಸಿ, ಸ್ಪೀಕರ್ ಮತ್ತು ಸರಕಾರ ಹತ್ತು ಮಂದಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿದೆ. ಅದು ಅಕ್ಷಮ್ಯ’ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ಗುರುವಾರ ನಗರದ ಗಾಂಧಿಭವನದಲ್ಲಿ ‘ಸಿಟಿಜನ್ಸ್ ಫಾರ್ ಡೆಮಾಕ್ರೆಸಿ’ ಆಯೋಜಿಸಿದ್ದ ‘ಶಾಸಕರ ಅಮಾನತು ಒಂದು ಚರ್ಚೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರ ಅಮಾನತು ವಿಚಾರವಾಗಿ ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರ ಪ್ರಮುಖ ಪಾತ್ರವೂ ಇದೆ. ಸದನದ ರಾಜಕೀಯ ದುರ್ಬಳಕೆಗೆ ಇದು ಸ್ಪಷ್ಟ ಉದಾಹರಣೆ ಎಂದು ದೂರಿದರು.
ಹಿರಿಯ ಸಚಿವರು, ವಿಪಕ್ಷದ ಸದಸ್ಯರಿಗೂ ಮಾತನಾಡಲು ಅವಕಾಶ ಕೊಡಬೇಕೆಂದು ತಿಳಿಸಬೇಕಿತ್ತು. ಉಗುರು ತುದಿಯಲ್ಲಿ ಹೋಗುವುದನ್ನು ಖಡ್ಗ ತೆಗೆದುಕೊಂಡು ಕತ್ತರಿಸುವುದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
ಸುಗಮ ಕಲಾಪ ನಡೆಯಲು ಆಡಳಿತ ಪಕ್ಷದ ಹೊಣೆಯೂ ಪ್ರಮುಖವಾದುದು. ದೇಶದಲ್ಲಿ ಕಾಂಗ್ರೆಸ್ ಪಕ್ಷ 50-60 ವರ್ಷ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ. ಇದು ವ್ಯವಸ್ಥೆಗೆ ಹೊಡೆತ ನೀಡುತ್ತದೆ ಎಂದು ತಿಳಿಸಿದರು.
ಕಾಯಾರ್ಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗದ ಸದುಪಯೋಗ ಆಗಿದೆ. ಆದರೆ, ನ್ಯೂನತೆಗಳು, ದೋಷಗಳು ಬೆಳೆಯುತ್ತಿವೆ. ಅವನ್ನು ಸರಿಪಡಿಸುವ ಜವಾಬ್ದಾರಿ ನಮ್ಮದು. ಚುನಾವಣೆ ಸುಧಾರಣೆ ವ್ಯವಸ್ಥೆಗಾಗಿ ನಾನು ಸ್ಪೀಕರ್ ಆಗಿ ಶ್ರಮಿಸಿದ್ದೆ. ಒಂದು ರಾಷ್ಟ್ರ, ಒಂದು ಚುನಾವಣೆಯ ವಿಚಾರವನ್ನೂ ಪ್ರತಿಪಾದಿಸಿದ್ದೆ. ಆದರೆ, ಅದರ ಕುರಿತು ಮಾತನಾಡಲೊಲ್ಲದ ಕಾಂಗ್ರೆಸ್ಸಿಗರು ಬಿಜೆಪಿ ಮುಖಂಡರ ಮಾತಿಗೂ ಅವಕಾಶ ಕೊಡಲಿಲ್ಲ ಎಂದು ಅವರು ಹೇಳಿದರು.
ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಇವತ್ತಿನ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ವಿಧಾನಸಭೆಯಲ್ಲಿ ಪೈಲ್ವಾನರಂತೆ ತೊಡೆ ತಟ್ಟಿದವರು ಅವರು. ಸಂಸದೀಯ ವ್ಯವಹಾರಗಳ ಸಚಿವರ ನಡೆ ಬೇಸರ ತಂದಿದೆ. ಅವರು ನಿರ್ಣಯ ಮಂಡಿಸಿದ್ದಾರೆ. ಮುಂದಿನಬಾರಿ ವಜಾ ಮಾಡಬಹುದೇನೋ? ಎಂದು ಟೀಕಿಸಿದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ‘ವಿಧಾನ ಪರಿಷತ್‍ನಲ್ಲಿಯೂ ಉಪಸಭಾಪತಿಗಳ ಪೀಠ ಹತ್ತಿ ಉಪಸಭಾಪತಿಗಳ ಕುತ್ತಿಗೆಪಟ್ಟಿ ಹಿಡಿದು ಎಳೆದ ಘಟನೆ ನಡೆದಾಗಲೂ ಅಮಾನತು ಮಾಡಲಿಲ್ಲ. ಆದರೆ, ಈಗ ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದರು.