ಪರೀಕ್ಷಾ ಅಕ್ರಮದ ಶಂಕೆ: ಕೌನ್ಸಿಲಿಂಗ್ ನಿಂದ 36 ಅಭ್ಯರ್ಥಿಗಳನ್ನು ನಿಷೇಧಿಸಿದ ComedK

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ( ಕಾಮೆಡ್ ಕೆ ) ನಡೆಸುವ ಕಾಮೆಡ್-ಕೆ ಯುಜಿ ಪ್ರವೇಶ ಪರೀಕ್ಷೆ (ಯುಜಿಇಟಿ)ಯಲ್ಲಿ ಪರೀಕ್ಷಾ ಅಕ್ರಮ ಎಸಗಿರುವ ಶಂಕೆಯ ಮೇರೆಗೆ 36 ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ 32,670 ಸೀಟುಗಳ ಭರ್ತಿಗಾಗಿ ಕಾಮೆಡ್-ಕೆ ಯುಜಿಇಟಿಯನ್ನು ಮೇ 9 ರಂದು 280 ನಗರಗಳ 400 ಕೇಂದ್ರಗಳಲ್ಲಿ ನಡೆಸಲಾಗಿತ್ತು. ಎರಡು ಅವಧಿಗಳಲ್ಲಿ ನಡೆದ ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಕರ್ನಾಟಕದ 36,954 ಮತ್ತು ಹೊರರಾಜ್ಯದ 73,820 ಸೇರಿದಂತೆ ಸುಮಾರು 1,10,774 ಅಭ್ಯರ್ಥಿಗಳು ಹಾಜರಾಗಿದ್ದರು. ಅಭ್ಯರ್ಥಿಗಳ ಶ್ರೇಯಾಂಕಗಳನ್ನು ಪ್ರಕಟಿಸಲು ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ಪರಿಗಣಿಸಲಾಗಿತ್ತು.
ಮೇ 29 ರಂದು ಫಲಿತಾಂಶ ಪ್ರಕಟವಾದಾಗ, ಟಾಪ್ 10 ಪಟ್ಟಿಯಲ್ಲಿ ಮೊದಲ ಆರು ಶ್ರೇಯಾಂಕಗಳ ಪೈಕಿ ಐದು ಟಾಪರ್ಗಳು ಜಮ್ಶೆಡ್ಪುರದವರಾಗಿದ್ದರು. ಶಂಕಿತ ವಿದ್ಯಾರ್ಥಿಗಳು ಜಮ್ಶೆಡ್ಪುರದ ಮೂರು ಕೇಂದ್ರಗಳಾದ ಜೈ ಶ್ರೀ ಇನ್ಫೋಟೆಕ್, ಗೋವಿಂದ ವಿದ್ಯಾಲಯ ಮತ್ತು ಕ್ರಿಯೇಟಿವ್ ಕಂಪ್ಯೂಟರ್ಸ್ ನಲ್ಲಿ ಪರೀಕ್ಷೆ ಬರೆದಿದ್ದರು. ಶಂಕಿತರಲ್ಲಿ ಹೆಚ್ಚಿನವರು 500 ರ ಒಳಗಿನ ಶ್ರೇಯಾಂಕ ಹೊಂದಿದ್ದು, ಅವರಲ್ಲಿ ನಾಲ್ವರು ಟಾಪ್ 10 ರಲ್ಲಿದ್ದಾರೆ. ಗುರುತಿಸಲಾದ ಪ್ರತಿಯೊಬ್ಬ ಅಭ್ಯರ್ಥಿಗೆ ಕಾಮೆಡ್-ಕೆ ಪ್ರತ್ಯೇಕವಾಗಿ ನೋಟಿಸ್ ನೀಡಿದ್ದು, ಜುಲೈ 10, 2026 ರಂದು ಅಥವಾ ಅದಕ್ಕೂ ಮುನ್ನ ಬೆಂಗಳೂರಿನಲ್ಲಿರುವ ಕಾಮೆಡ್-ಕೆ ಅಧಿಕಾರಿಗಳ ಮುಂದೆ ಹಾಜರಾಗಲು ಅವಕಾಶ ನೀಡಿದೆ.
3ನೇ ರಾಂಕ್ ಉತ್ತರಾಖಂಡ, 7ನೇ ರಾಂಕ್ ಆಂಧ್ರಪ್ರದೇಶ, 8ನೇ ರಾಂಕ್ ಛತ್ತೀಸ್ಗಢ, 9ನೇ ರಾಂಕ್ ಪಂಜಾಬ್ ಮತ್ತು 10ನೇ ರಾಂಕ್ ಬಿಹಾರದ ವಿದ್ಯಾರ್ಥಿ ಪಾಲಾಗಿತ್ತು.
ಅಭ್ಯರ್ಥಿಗಳಿಗೆ ಅವರ ಅಕ್ರಮದ ಭಾಗೀದಾರಿಕೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ಪರಿಶೀಲಿಸಲು ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಮ್ಮ ವಿವರಣೆಯನ್ನು ನೀಡಲು ಅವಕಾಶ ನೀಡಲಾಗುತ್ತದೆ. ತನಿಖೆ ಪೂರ್ಣಗೊಳ್ಳುವವರೆಗೆ ಈ ಅಭ್ಯರ್ಥಿಗಳಿಗೆ ಪ್ರಸ್ತುತ ನಡೆಯುತ್ತಿರುವ ಕೌನ್ಸಿಲಿಂಗ್ ಮತ್ತು ಸೀಟು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ. ಈ ವಿದ್ಯಾರ್ಥಿಗಳಿಗೆ ಪರೀಕ್ಷಾ ಮೇಲ್ವಿಚಾರಕರ ಮೂಲಕ ಹೊರಗಿನಿಂದ ಸಹಾಯ ಸಿಕ್ಕಿರುವ ಶಂಕೆಯಿದ್ದು, ಆ ಮೇಲ್ವಿಚಾರಕರಿಗೂ ಕಾಮೆಡ್-ಕೆ ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆ ಮುಗಿದು ಅಂತಿಮ ಫಲಿತಾಂಶ ಪ್ರಕಟವಾದ ತಕ್ಷಣವೇ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ವಿಧಿವಿಜ್ಞಾನ ತನಿಖೆಯನ್ನು ಕೈಗೊಳ್ಳಲಾಗಿತ್ತು. ಈ ತನಿಖೆಯ ಸಮಯದಲ್ಲಿ ಜಮ್ಶೆಡ್ಪುರ ಕೇಂದ್ರಗಳಲ್ಲಿ ಕೆಲವು ಅಕ್ರಮಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಮ್ಮ ಶೈಕ್ಷಣಿಕ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಪರಿಶೀಲಿಸುತ್ತೇವೆ. ಐಟಂ ಅನಾಲಿಸಿಸ್ ಹಾಗೂ ಡಿಸ್ಟ್ರಾಕ್ಟರ್ ಇಂಡೆಕ್ಸ್ನಂತಹ ಪ್ರಕ್ರಿಯೆಗಳನ್ನು ಬಳಸುತ್ತೇವೆ. ವಿದ್ಯಾರ್ಥಿಗಳ 12ನೇ ತರಗತಿಯ ಅಂಕಗಳು ಕಾಮೆಡ್-ಕೆ ಪರೀಕ್ಷೆಯ ಕಾರ್ಯಕ್ಷಮತೆಗೆ ಹೊಂದಾಣಿಕೆಯಾಗುತ್ತವೆಯೇ ಎಂದೂ ಪರಿಶೀಲಿಸಿದ್ದೇವೆ. ನಾವು ಇದನ್ನು 2006 ರಿಂದಲೂ ಮಾಡುತ್ತಿದ್ದೇವೆ" ಎಂದು ಕಾಮೆಡ್-ಕೆ ಕಾರ್ಯದರ್ಶಿ ಎಸ್. ಕುಮಾರ್ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ತನಿಖೆಯು ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಆರು ಮಾನದಂಡಗಳ ಮೇಲೆ ನಡೆದಿದೆ. ಪರೀಕ್ಷೆಯ ಮೊದಲ 30 ನಿಮಿಷ ಮತ್ತು ಕೊನೆಯ 30 ನಿಮಿಷಗಳಲ್ಲಿ ವಿದ್ಯಾರ್ಥಿಗಳ ವರ್ತನೆಯನ್ನು ಗಮನಿಸಲಾಗುವುದು. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಆರಂಭದಲ್ಲಿ ಅಷ್ಟೊಂದು ಸಕ್ರಿಯವಾಗಿರದೆ, ಕೊನೆಯ ಅರ್ಧ ಗಂಟೆಯಲ್ಲಿ 80-90 ಪ್ರಶ್ನೆಗಳನ್ನು ಉತ್ತರಿಸಿರುವುದು ಕಂಡುಬಂದಿದೆ. ನಾವು ಈ ವಿದ್ಯಾರ್ಥಿಗಳ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದ್ದು, ಅಕ್ರಮ ನಡೆಸಿರುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ವಿದ್ಯಾರ್ಥಿಗಳು ವಿವರಣೆ ನೀಡಲು ಬಂದಾಗ ಈ ಪುರಾವೆಗಳನ್ನು ಅವರ ಮುಂದೆ ಇಡಲಾಗುವುದು" ಎಂದು ಕಾಮೆಡ್-ಕೆ ಕಾರ್ಯದರ್ಶಿ ಎಸ್. ಕುಮಾರ್ ಹೇಳಿದ್ದಾರೆ.
ಕಾಮೆಡ್-ಕೇಯ ಪರೀಕ್ಷಾ ಸೇವಾ ಪೂರೈಕೆದಾರರು ಮತ್ತು ತಾಂತ್ರಿಕ ಪಾಲುದಾರರ ನೆರವಿನೊಂದಿಗೆ ನಡೆಸಲಾದ ವಿವರವಾದ ಪರಿಶೀಲನೆಯಲ್ಲಿ, ಕೆಲವು ಅಭ್ಯರ್ಥಿಗಳು ಮತ್ತು ಸಿಬ್ಬಂದಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸ್ಪಷ್ಟ ಹಾಗೂ ನಿರ್ಣಾಯಕ ಪುರಾವೆಗಳು ಲಭ್ಯವಾಗಿವೆ .ಜುಲೈ 10 ರಂದು ವಿದ್ಯಾರ್ಥಿಗಳಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಿದ ಬಳಿಕ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.






