ಮೈಸೂರು ಸ್ಯಾಂಡಲ್ ಸೋಪ್ಗೆ ‘ನಟಿ ತಮನ್ನಾ ರಾಯಭಾರಿ’
► ಸಚಿವ ಎಂ.ಬಿ.ಪಾಟೀಲ್ ಸಮರ್ಥನೆ: ಕರವೇ ಆಕ್ಷೇಪ ► ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ನಟಿ ತಮನ್ನಾ ಭಾಟಿಯಾ (PC :x/@tamannaahspeaks)
ಬೆಂಗಳೂರು : ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿ.ತನ್ನ ಬ್ರಾಂಡ್ ರಾಯಭಾರಿ ಆಗಿ ಬಹುಬಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷದ ಅವಧಿಗೆ 6.20ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ನೀಡಿ ರಾಜ್ಯ ಸರಕಾರ ನೇಮಕ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಗುರುವಾರ ಈ ಸಂಬಂಧ ರಾಜ್ಯ ಸರಕಾರದ ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ಕಾಂತಮ್ಮ ಎನ್.ಎಂ. ಆದೇಶ ಹೊರಡಿಸಿದ್ದಾರೆ. ‘2028ರ ವೇಳೆ ಕೆಎಸ್ ಆಂಡ್ ಡಿಎಲ್ 5 ಸಾವಿರ ಕೋಟಿ ರೂ.ಆದಾಯ ಗಳಿಕೆಯ ಗುರಿಯನ್ನಿಟ್ಟುಕೊಂಡಿದೆ. ಆ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಸಮರ್ಥಿಸಿದ್ದಾರೆ.
ಅವಿವೇಕದ ತೀರ್ಮಾನ: ‘ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.20ಕೋಟಿ ರೂ.ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ಷೇಪಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಮೈಸೂರು ಸೋಪ್ಸ್ ಸಂಸ್ಥೆ ಕರ್ನಾಟಕ ಸರಕಾರದ ಸ್ವಾಮ್ಯದ ಕಂಪೆನಿ. 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಸ್ಥಾಪಿಸಿದರು. ಈ ಕಂಪೆನಿಯು ಕರ್ನಾಟಕದಲ್ಲಿ ಜನಪ್ರಿಯ ಬ್ರಾಂಡ್ಗಳಲ್ಲಿ ಒಂದಾಗಿದೆ ಮತ್ತು ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತೆ?’ ಎಂದು ಪ್ರಶ್ನಿಸಿದ್ದಾರೆ.
ಈ ನೇಮಕಕ್ಕಾಗಿ ಕರ್ನಾಟಕ ಸರಕಾರವು 6.20 ಕೋಟಿ ರೂ. ಭಾರೀ ಮೊತ್ತವನ್ನು ವ್ಯಯಿಸಿರುವುದು ಇನ್ನಷ್ಟು ಆಕ್ಷೇಪಾರ್ಹವಾಗಿದೆ. ಈ ನಿರ್ಧಾರದ ವಿರುದ್ಧ ನಮ್ಮ ತೀವ್ರ ವಿರೋಧವಿದೆ. ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ, ಉದಾಹರಣೆಗೆ ಶಿಕ್ಷಣ, ಆರೋಗ್ಯ, ಅಥವಾ ಉದ್ಯೋಗ ಸೃಷ್ಟಿಗೆ ಬಳಸಬಹುದಾಗಿತ್ತು. ಸರಕಾರವು ಜನರ ತೆರಿಗೆ ಹಣವನ್ನು ಈ ರೀತಿ ವ್ಯರ್ಥವಾಗಿ ಖರ್ಚು ಮಾಡಿರುವುದು ಖಂಡನೀಯ ಎಂದು ಅವರು ಟೀಕಿಸಿದ್ದಾರೆ.
ತಮನ್ನಾ ಭಾಟಿಯಾ ಕರ್ನಾಟಕದ ಸಂಸ್ಕೃತಿ, ಭಾಷೆ, ಅಥವಾ ಮೈಸೂರು ಸೋಪ್ಸ್ ನ ಇತಿಹಾಸದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಇಂತಹ ಸ್ಥಿತಿಯಲ್ಲಿ ಅವರನ್ನು ರಾಯಭಾರಿ ಆಗಿ ಆಯ್ಕೆ ಮಾಡುವುದು ಸಂಪೂರ್ಣ ಅಪ್ರಸ್ತುತವಾಗಿದೆ. ಹಿಂದಿಚಿತ್ರರಂಗದ ನಟಿಯರನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಸ್ಥಳೀಯ ಸಂಸ್ಕೃತಿಯ ಮೇಲೆ ಹಿಂದಿ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುವುದು ಸ್ವೀಕಾರಾರ್ಹವಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ :
ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಕನ್ನಡ ನಟಿ ಬದಲು ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ರಾಜ್ಯ ಸರಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
"ಕರ್ನಾಟಕದ ಅಸ್ಮಿತೆ ಮೈಸೂರು ಸ್ಯಾಂಡಲ್ ಸೋಪ್ ಗೆ ಉತ್ತರ ಭಾರತದವರು ಬಂದು ಬ್ರಾಂಡ್ ಅಂಬಾಸಿಡರ್ ಆಗೋದು ಬೇಡ. ಕನ್ನಡ ನಾಡಿನಲ್ಲಿಯೇ ಸುಂದರ ನಟಿಯರು ಇದ್ದಾರೆ. ಕನ್ನಡಿಗರ ವಿರೋಧದ ನಡುವೆಯೂ 6.20 ಕೋಟಿ ದುಂದು ವೆಚ್ಚ ಮಾಡಬೇಡಿ. ಅದನ್ನೇ ಅಭಿವೃದ್ಧಿಗೆ ಬಳಸಿ. ಒಪ್ಪಂದ ರದ್ದು ಮಾಡಿ" ಎಂದು ರೂಪೇಶ್ ರಾಜಣ್ಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮದ್ದೇರಿ ಚೇತನ್ ಗೌಡ ಎಂಬವರು ಟ್ವೀಟ್ ಮಾಡಿ, ಮೈಸೂರು ಸ್ಯಾಂಡಲ್ ಸೋಪ್ ಎಂದು ಕನ್ನಡದಲ್ಲಿರಲಿ ಜೊತೆಗೆ ಆಂಗ್ಲ ಭಾಷೆಯಲ್ಲಿರಲಿ, ಹಾಗೂ ಕನ್ನಡೇತರ ವ್ಯಕ್ತಿಗಳನ್ನು ಜಾಹೀರಾತಿನಲ್ಲಿ ಬಳಸುತ್ತಿರುವ ನಿಮ್ಮ ನಡೆ ವಿರೋಧಿಸಿ ಇನ್ನು ಮುಂದೆ ನಾನು ಹಾಗೂ ನಮ್ಮ ಕುಟುಂಬ ಸದರಿ ಸೋಪು ಬಳಸುವುದಿಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
"ಕನ್ನಡಿಗರ ವಿರೋಧಿ ಕಾಂಗ್ರೆಸ್ ನೇತೃತ್ವದ ಸರಕಾರ, ಈ ಆದೇಶ ಕೂಡಲೇ ನಿಲ್ಲಿಸಬೇಕು. ಕನ್ನಡ ಅಸ್ಮಿತೆ ಎಂದರೆ ಎಸ್ಬಿಐ ಮ್ಯಾನೇಜರ್ ಆದ್ರು ಒಂದೇ, ಪರಭಾಷ ನಟಿ ಆದ್ರು ಒಂದೇ. ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿ ಎಂದರೆ ಅದರ ಹೆಸರೇ ರಾಯಭಾರಿ ಮತ್ಯಾರು ಬೇಡ. ಕಳೆದ ವರ್ಷ 400 ಕೋಟಿ ಲಾಭ ಮಾಡಿರುವ ಸಂಸ್ಥೆಗೆ, ಹಣದ ಪೋಲು ಮಾಡುವ ಯಾವ ಅವಶ್ಯಕತೆಯು ಇಲ್ಲ. ಸರಕಾರ ಈ ಕೂಡಲೇ ಇಂತಹ ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯಬೇಕು" ಎಂದು ಗುರುದೇವ್ ನಾರಾಯಣ್ ಎಂಬವರು ಪೋಸ್ಟ್ ಮಾಡಿದ್ದಾರೆ.
ಮೋಹನ್ ದಾಸರಿ ಎಂಬವರು ಈ ಕುರಿತು ಎಕ್ಸ್ ಲ್ಲಿ ಪೋಸ್ಟ್ ಮಾಡಿ, "ಪ್ಯಾನ್ ಇಂಡಿಯಾ ನಟಿಯಾಗಿ, ತಮನ್ನಾ ತಮ್ಮ ಚಲನಚಿತ್ರಗಳು ಮತ್ತು ಹಾಡುಗಳ ಮೂಲಕ ದೇಶದಾದ್ಯಂತ ತಮ್ಮದೇ ಆದ ಬ್ರ್ಯಾಂಡ್ ಅನ್ನು ಸೃಷ್ಟಿಸಿಕೊಂಡಿದ್ದಾರೆ. ನಮ್ಮ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಭಾರತದ ಮೂಲೆ ಮೂಲೆಯಲ್ಲಿ ಪ್ರಚಾರ ಪಡಿಸಲು ತಮನ್ನಾ ಅವರನ್ನು ನಮ್ಮ ಬ್ರಾಂಡ್ ರಾಯಭಾರಿಯಾಗಿ ನೇಮಿಸಿರುವುದು ಸ್ವಾಗತಾರ್ಹ ಕ್ರಮ. ಇದರ ಜೊತೆಗೆ ನಮ್ಮ ಕನ್ನಡ ಕಲಾವಿದರನ್ನು ಬ್ರಾಂಡ್ ರಾಯಭಾರಿಯಾಗಿ ನೇಮಿಸಿ" ಎಂದು ಆಗ್ರಹಿಸಿದರು.







