ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ತಮಿಳುನಾಡು ಸರ್ಕಾರದ ನಿಯೋಗ

ಬೆಂಗಳೂರು: ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ದಕ್ಷಿಣ ರಾಜ್ಯಗಳ ವಿರೋಧಿ ನಿಲುವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಿದರು.
ಡಿಲಿಮಿಟೇಷನ್ ಮತ್ತಿತರ ಸಂಗತಿಗಳ ವಿಚಾರದಲ್ಲಿ ಧ್ವನಿ ಎತ್ತುವಂತೆ, ಪ್ರತಿಭಟನೆ ಜೊತೆಗೆ ನಿಲ್ಲುವಂತೆ ಚರ್ಚಿಸಿದರು. ಇದಕ್ಕೂ ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿಗಳ ಜೊತೆ ಇದೇ ವಿಚಾರಗಳ ಬಗ್ಗೆ ಚರ್ಚಿಸಿದರು.
ತಮಿಳುನಾಡು ಸರ್ಕಾರದ ನಿಯೋಗ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಚರ್ಚಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ತಮ್ಮ ಬೆಂಬಲವನ್ನೂ ಸೂಚಿಸಿದರು.
ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.