ಸಾವಿನಲ್ಲೂ ಸಾರ್ಥಕತೆ ಮೆರೆದ ಟ್ಯಾಕ್ಸಿ ಚಾಲಕ: ಮಗನ ಅಂಗಾಂಗ ದಾನ ಮಾಡಿದ ಪೋಷಕರು

ಮದನ್ ಕುಮಾರ್ ಎಸ್.ವಿ
ಬೆಂಗಳೂರು, ಸೆ.30: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಟ್ಯಾಕ್ಸಿ ಚಾಲಕನ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ನಿಸ್ವಾರ್ಥತೆಯನ್ನು ಮೆರೆದಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ಟ್ಯಾಕ್ಸಿ ಚಾಲಕನಾಗಿದ್ದ ಮದನ್ ಕುಮಾರ್ ಎಸ್.ವಿ (22) ಅವರು ಸೆ.24 ರಂದು ದಾಬಸ್ಪೇಟೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿತ್ತಾದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಮದನ್ಕುಮಾರ್ ಅವರ ಕುಟುಂಬಸ್ಥರಾದ ವಿಜಯ್ ಕುಮಾರ್ ಎಸ್.ವಿ ಮತ್ತು ತಾಯಿ ಲಕ್ಷ್ಮೀದೇವಿ, ಸಹೋದರ ಮಂಜುನಾಥ್ ಎಸ್.ವಿ ಅವರು ನೆಲಮಂಗಲದ ಸೋಮಸಾಗರ ತಾನುಗುಂಡ್ಲ ವಾಸಿಗಳಾಗಿದ್ದು, ಇವರು ಮದನ್ ಅವರ ಅಂಗಾಂಗಗಳನ್ನು ದಾನ ಮಾಡುವುದಾಗಿ ತಿಳಿಸಿದ್ದರು.
ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದನ್ಕುಮಾರ್ ಅವರ ಯಕೃತ್ತು ಮತ್ತು ಎಡ ಮೂತ್ರಪಿಂಡವನ್ನು ಯಶವಂತಪುರದ ಸ್ಪರ್ಶ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಬಲ ಮೂತ್ರಪಿಂಡವನ್ನು ಎಚ್ಎಎಲ್ ಮಣಿಪಾಲ್ ಆಸ್ಪತ್ರೆಗೆ, ಹೃದಯವನ್ನು ಜಯದೇವ ಆಸ್ಪತ್ರೆಗೆ ಮತ್ತು ಅವರ ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ.
ಈ ಸಂಬಂಧ ಸ್ಪರ್ಶ್ ಆಸ್ಪತ್ರೆಯ ಗ್ರೂಪ್ ಸಿಒಒ ಜೋಸೆಫ್ ಪಸಂಘ ಮಾತನಾಡಿ, ನೋವಿನಲ್ಲೂ ಕುಟುಂಬಸ್ಥರು ನಿಸ್ವಾರ್ಥ ಮನೋಭಾವವನ್ನು ತೋರಿದ್ದು, ಯುವಕನ ಅಂಗಾಂಗ ದಾನದ ಮೂಲಕ ಮತ್ತೊಂದು ಕುಟುಂಬದ ನೋವನ್ನು ದೂರ ಮಾಡಿದ್ದಾರೆ. ದಾನ ಮಾಡಿದ ಪ್ರತಿಯೊಂದು ಅಂಗವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ. ಇದು ಇತರರಿಗೆ ಹೊಸ ಜೀವನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.







