ಒಳಮೀಸಲಾತಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಎಸ್‍ಸಿ ಜಾತಿಗಳ ಬಗ್ಗೆ ಮಾಹಿತಿಯೇ ಇರಲಿಲ್ಲ: ಡಿ.ಜಿ.ಸಾಗರ್

ಬೆಂಗಳೂರು: ಒಳಮೀಸಲಾತಿ ಸಮೀಕ್ಷೆಗಾಗಿ 65 ಸಾವಿರ ಶಿಕ್ಷಕರನ್ನು ಬಳಸಿಕೊಂಡಿದ್ದರೂ, ಆ ಶಿಕ್ಷಕರಿಗೆ ಎಸ್‍ಸಿ (ಕೇರಿ) ಓಣಿಗಳೇ ಗೊತ್ತಿಲ್ಲ. ಎಸ್‍ಸಿಯಲ್ಲಿರುವ ಜಾತಿಗಳ ಬಗ್ಗೆ ಮಾಹಿತಿಯೇ ಇರಲಿಲ್ಲ. ಸರಕಾರ ಒಳಮೀಸಲಾತಿ ಸಮೀಕ್ಷೆಯ ದತ್ತಾಂಶವನ್ನು ಜಿಲ್ಲೆ, ತಾಲೂಕಿನ ಅನುಸಾರ ಜನರಿಗೆ ತಿಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಾ.ಡಿ.ಜಿ.ಸಾಗರ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ದಸಂಸ ವತಿಯಿಂದ ಆಯೋಜಿಸಿದ್ದ ‘ದಲಿತರ ಜ್ವಲಂತ ಸಮಸ್ಯೆಗಳು-ವಿಚಾರ ಸಂಕಿರಣ’ದಲ್ಲಿ ಮಾತನಾಡಿದ ಅವರು, ಮೀಸಲಾತಿ ಎಂದರೆ ವಂಚನೆಗೊಳಗಾಗಿರುವ ಸಮುದಾಯಗಳಿಗೆ ನ್ಯಾಯಯುತ ಪಾಲನ್ನು ನೀಡುವುದು. ನ್ಯಾ. ನಾಗಮೋಹನ್‍ದಾಸ್ ಏಕಸದಸ್ಯ ಆಯೋಗದ ನೇತೃತ್ವದಲ್ಲಿ ಒಳಮೀಸಲಾತಿಗಾಗಿ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಒಳಮೀಸಲಾತಿಯನ್ನು ಸಮಾನವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ನ್ಯಾ.ನಾಗಮೋಹನ್‍ದಾಸ್ ಅವರು ಸರಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ. ಆ ವರದಿ ಅನೇಕ ಕಗ್ಗಂಟುಗಳಾಗಿ ಪರಿಣಮಿಸಿದೆ. ಒಳಮೀಸಲಾತಿ ದತ್ತಾಂಶ ಸರಿಯಾಗಿ ಆಗಿಲ್ಲ. ದತ್ತಾಂಶಗಳನ್ನು ಸಂಗ್ರಹಿಸಲು 65 ಸಾವಿರ ಶಿಕ್ಷಕರನ್ನು ಬಳಸಿಕೊಂಡಿರುವುದು ಶ್ಲಾಘನೀಯವಾದರೂ ಕೂಡ. ಒಳಮೀಸಲಾತಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಸರಿಯಾದ ಮೊಬೈಲ್‍ಗಳು ಇರಲಿಲ್ಲ. ಕೆಲವರಿಗೆ ಮೊಬೈಲ್ ಉಪಯೋಗಿಸುವುದು ಬರಲಿಲ್ಲ. ಜತೆಗೆ ನೆಟ್ವರ್ಕ್ ಸಮಸ್ಯೆ ಕೂಡ ಎದುರಾಗಿತ್ತು. ಆದ್ದರಿಂದ ಒಳಮೀಸಲಾತಿ ಸಮೀಕ್ಷೆಯಲ್ಲಿ ಅನೇಕ ವ್ಯತ್ಯಾಸಗಳಾಗಿವೆ. ನೈಜ ದತ್ತಾಂಶಗಳ ಆಧಾರದಿಂದ ಒಳಮೀಸಲಾತಿ ಕುರಿತು ಸರಕಾರ ನಿರ್ಧಾರ ಮಾಡಲಿ ಎಂದು ಅಭಿಪ್ರಾಯಪಟ್ಟರು.
ಯಾವುದೇ ಆಯೋಗ ಸರಕಾರಕ್ಕೆ ವರದಿಯನ್ನು ಸಲ್ಲಿಸುತ್ತವೆ. ಆದರೆ ಆ ವರದಿಯನ್ನು ಸ್ವೀಕರಿಸುವ ಅಧಿಕಾರ ಸರಕಾರಕ್ಕೆ ಇರುತ್ತದೆ. ಸರಕಾರದ ಎಲ್ಲರಿಗೂ ಸರಿಯಾದ ನ್ಯಾಯವನ್ನು ನೀಡಬೇಕು. ಒಂದು ಗುಂಪಿನವರು ತಕ್ಷಣ ಒಳಮೀಸಲಾತಿ ಜಾರಿ ಮಾಡಿ ಎಂದು ಒತ್ತಾಯಿಸುತ್ತಾರೆ. ನ್ಯಾಯಯುತ, ವೈಜ್ಞಾನಿಕವಾಗಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಸಿಗಲೇ ಬೇಕು ಎನ್ನುವುದು ಒಂದಾದರೆ, ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ ಇವು ಜಾತಿಗಳೇ ಅಲ್ಲ. 98 ಜಾತಿಗಳು ಎಂದು ಆಯೋಗ ಮತ್ತು ಸರಕಾರಗಳು ಹೇಳಿ, ಜಾತಿಗಳನ್ನು ಹೊಡೆದು ಇನ್ನೊಂದು ಗುಂಪು ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ ಕಲಿವೀರ ಮಾತನಾಡಿ, ಸರ್ಟನ್ ಲ್ಯಾಂಡ್ ಬಳಸುವ ಜಾಗದಲ್ಲಿ ಗ್ರ್ಯಾಂಟೆಡ್ ಲ್ಯಾಂಡ್ ಬಳಸಿರುವುದರಿಂದ ದಲಿತರು ಪಿಟಿಸಿಎಲ್ ಕಾಯ್ದೆ ಪ್ರಕಾರ ಭೂಮಿ ಪಡೆಯಲು ಆಗುತ್ತಿಲ್ಲ. ನ್ಯಾಯಾಲಯಗಳು ಗ್ರ್ಯಾಂಟೆಡ್ ಲ್ಯಾಂಡ್‍ನ್ನು ಒಪ್ಪುತ್ತಿಲ್ಲ. ಅದಕ್ಕಾಗಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬಾರದು. ಯಾಕೆಂದರೆ ಅಲ್ಲಿವೂ ಮನುವಾದಿಗಳು ಇದ್ದಾರೆ. ಅದಕ್ಕಾಗಿ ಪಿಟಿಸಿಎಲ್ ಕಾಯ್ದೆಗೆ ರಾಜ್ಯದಲ್ಲಿ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ದಸಂಸ ರಾಜ್ಯ ಸಂಚಾಲಕ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್‍ಸಿಎಸ್‍ಪಿ–ಟಿಎಸ್‍ಪಿ ನೋಡಲ್ ಅಧಿಕಾರಿ ವೆಂಕಟಯ್ಯ ಉದ್ಘಾಟಿಸಿದರು. ವಕೀಲ ಬಿ.ಟಿ.ವೆಂಕಟೇಶ್, ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ, ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಎಂ.ರಾಜು ಸಹಿತ ವಿವಿಧ ಮುಖಂಡರು ಉಪಸ್ಥಿತರಿದ್ದರು.







