ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಸಿಎಂ, ಡಿಸಿಎಂ
ಹೊಸದಿಲ್ಲಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗವು ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕರ್ನಾಟಕ ಎದುರಿಸುತ್ತಿರುವ ಸಂಕಷ್ಟ ಸ್ಥಿತಿ ಬಗ್ಗೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ದೆಹಲಿಯಲ್ಲಿ ಗುರುವಾರ ವಿವರಿಸಿ, ಮನವಿ ಸಲ್ಲಿಸಿತು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಕಾನೂನು ಸಚಿವ ಎಚ್.ಕೆ. ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ಮಂದಿಟ್ಟು, ಅಂಕಿ ಅಂಶಗಳ ಸಮೇತ ಸಮರ್ಥ ವಾದ ಮಂಡಿಸಲು ರಾಜ್ಯಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.