ಕಾಂತರಾಜು ಆಯೋಗದ ವರದಿ ಸಲ್ಲಿಸುವಂತೆ ‘ಹಿಂದುಳಿದ ಜಾತಿಗಳ ಒಕ್ಕೂಟ’ ಪಟ್ಟು

ಬೆಂಗಳೂರು, ನ.20: ಎಚ್.ಕಾಂತರಾಜು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಮನವಿ ಸಲ್ಲಿವೆ.
ಸೋಮವಾರ ಇಲ್ಲಿನ ದೇವರಾಜು ಅರಸು ಭವನದಲ್ಲಿರುವ ಆಯೋಗದ ಕಚೇರಿಯಲ್ಲಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರನ್ನು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.
ಹಿಂದುಳಿದ ವರ್ಗದವರಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ. ಅದು ಸಂವಿಧಾನಬದ್ಧ ಹಕ್ಕು ಎನ್ನುವುದು ಸ್ಪಷ್ಟವಾಗಿದೆ. ಭಾರತದಲ್ಲಿ ಶ್ರೇಣಿಕೃತ ಜಾತಿ ಪದ್ಧತಿ ಇದೆ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮತ್ತು ಆಯಾ ಜಾತಿಗಳಿಗೆ ವಿಶೇಷ ಸವಲತ್ತು, ಹಣಕಾಸಿನ ನೆರವು, ಯೋಜನೆಗಳನ್ನು ನೀಡಲು ಅಂಕಿ-ಅಂಶಗಳು ಅವಶ್ಯಕವಾಗಿವೆ. ಇದು ತಿಳಿಯಬೇಕಾದರೆ ಸರ್ಕಾರವೇ ನೇಮಿಸಿದ್ದ ಕಾಂತರಾಜ್ ಅವರು ನೀಡಿರುವ ವರದಿಯನ್ನು ಸ್ವೀಕರಿಸಿ ಬಹಿರಂಗಪಡಿಸಬೇಕು ಎಂದು ನಿಯೋಗದ ಸದಸ್ಯರು ಒತ್ತಾಯಿಸಿದರು.
ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸವಲತ್ತುಗಳಿಗೆ ಅಂಕಿ-ಅಂಶ ಅವಶ್ಯಕ ಎನ್ನುವ ನಿಟ್ಟಿನಲ್ಲಿ ಎಲ್.ಜಿ. ಹಾವನೂರು, ಟಿ.ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಸಿದ್ಧಗೊಂಡವು. ಈ ದಾರಿಯಲ್ಲಿ ಕಾಂತರಾಜ್ ಆಯೋಗದ ವರದಿಯೂ ಸಾಗಿದ್ದು 2014ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕ ಮಾಡಿತ್ತು. ಹಿರಿಯ ವಕೀಲರೂ ಆದ ಕಾಂತರಾಜ್ ಅವರು ಆಯೋಗದ ಅಧ್ಯಕ್ಷರಾಗಿ 5 ವರ್ಷ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ 55 ಮಾನದಂಡಗಳನ್ನು ಅಳವಡಿಸಿ ಸಮಗ್ರ ವರದಿಯನ್ನು ಸಿದ್ಧಪಡಿಸಿದ್ದಾರೆ. ಆದರೆ 2018ರ ವಿಧಾನಸಭೆ ಚುನಾವಣೆಯಿಂದಾಗಿ ಸರಕಾರಕ್ಕೆ ವರದಿ ಸಲ್ಲಿಕೆಯಾಗಿಲ್ಲ. ಅಲ್ಲಿಂದ ಇಲ್ಲಿವರೆಗೂ ವರದಿ ಸ್ವೀಕರಿಸಲು ಸರ್ಕಾರ ಸಿದ್ಧವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ 180 ಕೋಟಿ ರೂ. ವೆಚ್ಚ ಮಾಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಎಲ್ಲ ಜಾತಿಗಳ ಹಿಂದುಳಿದವರ ಸಮಗ್ರ ವರದಿ ಸಿದ್ಧಪಡಿಸಿದ್ದು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಕಾಂತರಾಜ್ ಬಳಿಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಾಶ್ವತ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರು ಈ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಮಾಜಿ ಸಚಿವ ಬಿ.ಟಿ.ಲಲತಾ ನಾಯ್ಕ್, ಚಿಂತಕ ಮಾವಳ್ಳಿ ಶಂಕರ್, ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







