ಟ್ವಿಟರ್ ಗೆ 50 ಲಕ್ಷ ದಂಡ ವಿಧಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠದಿಂದ ತಡೆ
ಬೆಂಗಳೂರು, ಆ.10: ಕೆಲವು ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಟ್ವಿಟರ್ ಗೆ ಹೈಕೋರ್ಟ್‍ನ ಏಕ ಸದಸ್ಯ ಪೀಠ ವಿಧಿಸಿದ್ದ 50 ಲಕ್ಷ ರೂ. ದಂಡದ ಆದೇಶಕ್ಕೆ ಮುಂದಿನ ವಿಚಾರಣೆವರೆಗೂ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ.
ಅಲ್ಲದೆ, ಟ್ವಿಟರ್ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ದಂಡದ ಒಟ್ಟು ಮೊತ್ತದಲ್ಲಿ ಶೇ.50ರಷ್ಟು(25 ಲಕ್ಷ ರೂ) ಮುಂದಿನ ಒಂದು ವಾರದಲ್ಲಿ(ಠೇವಣಿ)ಪಾವತಿಸಲು ನಿರ್ದೇಶನ ನೀಡಿದೆ.
ಕೇಂದ್ರ ಸರಕಾರ ನೀಡಿದ್ದ ಶಾಸನೀಯ ನೋಟಿಸ್‍ಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. ಅಲ್ಲದೆ, ಪಾವತಿಸಬಹುದಾದ ಶೇ.50 ರಷ್ಟು ಮೊತ್ತವನ್ನು ದಂಡವನ್ನಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಮೇಲ್ಮನವಿದಾರರ ಪರವಾಗಿ(ಟ್ವಿಟರ್) ಇರಲಿದೆ ಎಂದು ತಿಳಿಸಿದೆ.
ತಡೆಯಾಜ್ಞೆಯನ್ನು ತೆರವುಗೊಳಿಸುವುದಕ್ಕಾಗಿ ಕೇಂದ್ರ ಸರಕಾರ ಆಕ್ಷೇಪಣೆಗಳನ್ನು ಮುಂದಿನ ದಿನಾಂಕದ ವೇಳೆಗೆ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ. ಜೊತೆಗೆ, ಟ್ವಿಟರ್‍ಗೆ ಕೆಲವು ಖಾತೆಗಳನ್ನು ನಿಬರ್ಂಧ ವಿಧಿಸುವಂತೆ ಸಕ್ಷಮ ಪ್ರಾಧಿಕಾರ ಸೂಚನೆಯನ್ನು ಉಲ್ಲಂಘಿಸಿ ದೇಶದ ಕಾನೂನಿಗೆ ಅಗೌರವ ತೋರಿದ್ದು, ಯಾವುದೇ ಖಾತೆಯನ್ನು ನಿಬರ್ಂಧಿಸದೆ ನಿರ್ಲಕ್ಷ್ಯ ಮಾಡಿದೆ ಎಂದು ಪೀಠ ಹೇಳಿತು.