ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡುವ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಪರಿಷತ್ತು 2022ರ ಜನವರಿಯಿಂದ ಡಿಸಂಬರ್ ಅಂತ್ಯದ ವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 51 ದತ್ತಿಗಳ 57 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. ಈಗ ಎಲ್ಲ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾದವರನ್ನು ಪ್ರಕಟಿಸಲಾಗಿದೆ.
ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಗೆ ಶಾರದಾ ಎ. ಅಂಚನ್ ಬರೆದಿರುವ ರಕ್ತ ಶುದ್ಧಿ, ಆರೋಗ್ಯ ವೃದ್ಧಿ ಕೃತಿ, ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಡಾ. ಸುಕನ್ಯಾ ಸೂನಗಹಳ್ಳಿ ಬರೆದಿರುವ ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ ಕೃತಿ ಹಾಗೂ ಭಾರತಿ ಮೋಹನ ಕೋಟಿ ದತ್ತಿ `ಅನುವಾದ ಸಾಹಿತ್ಯಕ್ಕಾಗಿ' ಎಸ್.ಬಿ. ರಂಗನಾಥ ಅನುವಾದಿಸಿರುವ ಕಗ್ಗತ್ತಲ ಕಾಲ ಕೃತಿ ಆಯ್ಕೆಯಾಗಿದೆ.
ಉತ್ತಮ ದಲಿತ ಸಾಹಿತ್ಯ ಪ್ರಶಸ್ತಿಗೆ ಡಾ. ಕೆ.ಪಿ. ನಾರಾಯಣಪ್ಪ ಬರೆದಿರುವ ದಲಿತ ಚಳುವಳಿ ಕೃತಿ, ದೀನ ದಲಿತರ ಮತ್ತು ಶೋಷಿತ ವರ್ಗಗಳ ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳ ಬಗ್ಗೆ ಸಾಹಿತ್ಯ ಕೃತಿಗೆ ನೀಡುವ ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿಗೆ ಡಾ. ಅಮ್ಮಸಂದ್ರ ಸುರೇಶ್ ಬರೆದಿರುವ ಮಹಾ ಮಾನವತಾವಾದಿ ಕೃತಿ ಆಯ್ಕೆಯಾಗಿದೆ.





