ವಿಕೃತ ವಿಶ್ವಗುರುವನ್ನು ಹೊಡೆದೋಡಿಸಬೇಕಿದೆ; ಶಾಂತಿಯ ಭಾರತಕ್ಕೆ ಮತ್ತೆ ಮರಳಬೇಕಿದೆ: ನಟ ಕಿಶೋರ್ ಕುಮಾರ್

ಬೆಂಗಳೂರು: ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹು ಭಾಷಾ ನಟ ಕಿಶೋರ್ ಕುಮಾರ್ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರ ಮತ್ತು ಹರಿಯಾಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ʼʼವಿಶ್ವಗುರುಗಳಿದ್ದಾರೆ ಎಚ್ಚರ .. ಈ ವಿಕೃತ ವಿಶ್ವಗುರುವನ್ನು ಹೊಡೆದೋಡಿಸಿ, ಪ್ರೀತಿಯ ಶಾಂತಿಯ ನಮ್ಮ ಭಾರತಕ್ಕೆ ಮರಳಬೇಕಿದೆʼʼ ಎಂದು ಕರೆ ಕೊಟ್ಟಿದ್ದಾರೆ.
ʼʼಮಣಿಪುರದಲ್ಲಿ, ಹರಿಯಾಣದಲ್ಲಿ, ಮುಂಬೈ ರೈಲಿನಲ್ಲಿ , ಟಿವಿ ಚಾನೆಲ್ಲುಗಳಲ್ಲಿ , ಪಾರ್ಲಿಮೆಂಟಿನಲ್ಲಿ , ಕಪಟ ಕ್ಯಾಪಿಟಲಿಸ್ಟುಗಳ ಡ್ರಾಯಿಂಗು ರೂಮಿನಲ್ಲಿ , ಕೋರ್ಟು ಕಚೇರಿಗಳಲ್ಲಿ , ಪೋಲೀಸು ವೇಷದಲ್ಲಿ , ಐಟಿ ಸೆಲ್ಲುಗಳಲ್ಲಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ..ದೇವರ ಹೆಸರಲ್ಲಿ, ಅಧಿಕಾರ ದಾಹದ ಹೊಲಸಲ್ಲಿ , ಮತಿಭ್ರಮಿತರಾದ ಮತಾಂಧ ವಿಶ್ವಗುರುಗಳಿದ್ದಾರೆ.. ಎಚ್ಚರʼʼ ಎಂದು ಕಿಡಿಕಾರಿದ್ದಾರೆ.
ಮುಂದುವರಿದು ʼʼಇವರಿಗೆ ಜೈ ಅನ್ನದಿದ್ದರೆ, ಇವರನ್ನು ಪ್ರಶ್ನಿಸಿದರೆ … ಯೋಚಿಸಿದರೂ ಸಹ … ಗುಂಡಿಕ್ಕುತ್ತಾರೆ, ಬಡಿದು ಕೊಲ್ಲುತ್ತಾರೆ, ಮನೆ ಮಠ ಸುಡುತ್ತಾರೆ, ಕೆಡವುತ್ತಾರೆ, ಮಕ್ಕಳನ್ನು ಕಡಿದು ಕೊಲ್ಲುತ್ತಾರೆ. ಬೆತ್ತಲೆ ಮೆರವಣಿಗೆ ಮಾಡಿಸಿ ಅತ್ಯಾಚಾರ ಮಾಡುತ್ತಾರೆ, ದೇಶದ ಕೀರ್ತಿ ವಿಶ್ವದಲ್ಲೆಲ್ಲ ಹರಡುತ್ತಾರೆ..ʼʼ ಎಂದು ಕಿಶೋರ್ ಕುಮಾರ್ ಬರೆದುಕೊಂಡಿದ್ದಾರೆ.







