ಬೆಂಗಳೂರು: ಫೆಲೆಸ್ತೀನ್ ಸಮಸ್ಯೆ ಕುರಿತ ವಿಚಾರಗೋಷ್ಠಿ ತಡೆಯಲು ಸಭಾಭವನಕ್ಕೆ ಬೀಗ ಜಡಿದು ಹೋದ ಪೊಲೀಸರು

ಬೆಂಗಳೂರು: ಫೆಲೆಸ್ತೀನ್ ಸಂಘರ್ಷ ಕುರಿತ ಕಾರ್ಯಕ್ರಮ ನಡೆಯಬೇಕಿದ್ದ ನಗರದ BIFT ಸಭಾಭವನಕ್ಕೆ ಪೊಲೀಸರು ಬೀಗ ಜಡಿದಿರುವ ಘಟನೆ ಮಂಗಳವಾರ ವರದಿಯಾಗಿದೆ.
ಇಂದು (ಮಂಗಳವಾರ) ಸಂಜೆ 6:30ಕ್ಕೆ ʼಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕʼ ನಗರದ ಕ್ವೀನ್ಸ್ ರಸ್ತೆಯಲ್ಲಿರುವ BIFT ಸಭಾಭವನದಲ್ಲಿ "ಫೆಲಸ್ತೀನ್ ಸಮಸ್ಯೆ: ಒಂದು ಅವಲೋಕನ" ವಿಚಾರಗೋಷ್ಠಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಶಿವಸುಂದರ್, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕು ಹೋರಾಟಗಾರ ಬಿ.ಟಿ ವೆಂಕಟೇಶ್ ಹಾಗೂ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಇದರ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡುವವರಿದ್ದರು.
ಆದರೆ, ಸಂಜೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ಇಂದು ಬೆಳಗ್ಗೆಯೇ ಆಗಮಿಸಿದ ಪೊಲೀಸರು ಸಭಾಭವನಕ್ಕೆ ಬೀಗ ಜಡಿದು ಕಾರ್ಯಕ್ರಮ ನಡೆಸದಂತೆ ತಡೆದಿದ್ದಾರೆ. ಅಲ್ಲದೇ ಆಯೋಜಕರನ್ನು ಠಾಣೆಗೆ ಕರೆಯಿಸಿ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿರುವುದಾಗಿ ಆಯೋಜಕರಲ್ಲಿ ಒಬ್ಬರು ತಿಳಿಸಿದ್ದಾರೆ.
ಅಲ್ಲದೇ, ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕೆಲವು ಗಣ್ಯರಿಗೂ ಫೋನ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಸಭಾಭವನದಲ್ಲಿ ಅಕ್ಟೋಬರ್ 26 ರಂದು ಫೆಲೆಸ್ತೀನ್ - ಇಸ್ರೇಲ್ ಕುರಿತ ಪತ್ರಿಕಾಗೋಷ್ಠಿ ನಡೆದಿತ್ತು.







