ರೈತ ಹೋರಾಟದ ಉದ್ದೇಶ ಸ್ಪಷ್ಟವಾಗಿರುವುದೇ ಅದರ ಯಶಸ್ವಿಗೆ ಕಾರಣ: ಪ್ರೊ.ಪರುಷೋತ್ತಮ ಬಿಳಿಮಲೆ

ಬೆಂಗಳೂರು: ದಿಲ್ಲಿಯ ರೈತ ಹೋರಾಟದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ರೈತರಿಗೂ ತಮ್ಮ ಧರಣಿಯ ಉದ್ದೇಶ ಸ್ಪಷ್ಟವಾಗಿ ತಿಳಿದಿತ್ತು. ಅಲ್ಲದೆ ಪ್ರತಿನಿತ್ಯ ಸುಮಾರು 2ಲಕ್ಷ ಮಂದಿ ರೈತರು ಹೋರಾಟದಲ್ಲಿ ಭಾಗವಹಿಸಿದ್ದರು. ಇದು ರೈತ ಹೋರಾಟವನ್ನು ಯಶಸ್ವಿಗೊಳಿಸಿದೆ ಎಂದು ಜೆಎನ್‍ಯುನ ನಿವೃತ್ತ ಪ್ರಾಧ್ಯಾಪಕ ಪ್ರೊ.ಪರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ರವಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಯೋಜಿಸಿದ್ದ ‘72 ಗಂಟೆಗಳು ದುಡಿಯುವ ಜನರ ಮಹಾ ಧರಣಿ ಹಾಗೂ ರಾಜಭವನ ಚಲೋ’ ಕಾರ್ಯಕ್ರಮದಲ್ಲಿ ದೆಹಲಿಯನ್ನು ಕೇಂದ್ರವಾಗಿಸಿ ಸುಮಾರು 11 ತಿಂಗಳು ನಿರಂತರವಾಗಿ ನಡೆದ ರೈತ ಆಂದೋಲನವನ್ನು ಮುಂದಿಡುವ ನವೀನ್ ಕುಮಾರ್ ರ ‘ಕದನ ಕಣ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೆಹಲಿಯ ರೈತ ಹೋರಾಟ ಸ್ವತಂತ್ರ ಭಾರತದ ಒಂದು ಚಾರಿತ್ರಿಕ ಹೋರಾಟವಾಗಿದೆ. ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಜಾರಿಮಾಡಲು ಹೊರಟ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೇಶದ ರೈತರು, ಮುಖ್ಯವಾಗಿ ಪಂಜಾಬ್, ಹರ್ಯಾಣ, ಉತ್ತರಪ್ರದೇಶಗಳ ರೈತರು ನಡೆಸಿದ ಹೋರಾಟ ಭಾರತದಲ್ಲಿ ಸ್ವಾತಂತ್ರ್ಯನಂತರದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ ಎಂದು ಹೇಳಬಹುದು. ಇದರ ಕ್ಷಣಕ್ಷಣದ ವಿವರ ನೀಡುವ ‘ಕದನ ಕಣ’ ಪುಸ್ತಕವು ಕನ್ನಡ ಭಾಷೆಗೆ, ನಾಡಿಗೆ ಒಂದು ಕೊಡುಗೆ ಎಂದು ಅವರು ಅಭಿಪ್ರಾಯಪಟ್ಟರು.
ರೈತರನ್ನು ಕೇಂದ್ರ ಸರಕಾರ ಕಡೆಗಣಿಸಿತ್ತು. ಆದರೆ ಸಾವಿರಾರು ಸಂಖ್ಯೆಯಲ್ಲಿ ಟ್ರಾಕ್ಟರ್ ಗಳೊಂದಿಗೆ ಬಂದಿಳಿದ ರೈತರು ಸರಕಾರಕ್ಕೆ ದೊಡ್ಡ ಅಚ್ಚರಿ ನೀಡಿದರು. ಅವರನ್ನು ಸ್ಟೇಡಿಯಂ ಒಳಗೆ ತುರುಕಲು ಸರಕಾರ ಪ್ರಯತ್ನಿಸಿದಾಗ, ರೈತ ಹೋರಾಟಗಾರರು, ‘ನಾವು ಸ್ವತಂತ್ರ ಭಾರತದ ಪ್ರಜೆಗಳು, ಯಾವುದೇ ಬಂಧನಗಳಿಗೆ ಒಳಪಡುವವರಲ್ಲ’ ಎಂದು ದೆಹಲಿಗೆ ಹೋಗುವ ಮುಖ್ಯರಸ್ತೆಗಳಲ್ಲೇ ತಂಗಿದರು. ರಸ್ತೆಗಳನ್ನು ಜಾಮ್ ಮಾಡಿದರು, ಜನರನ್ನು ಕಡೆಗಣಿಸುವ ಸರಕಾರಕ್ಕೆ ಚಳಿ ಬಿಡಿಸಿದರು ಎಂದು ಹೇಳಿದರು.
ರೈತ ಹೋರಾಟದಲ್ಲಿ ಅರ್ನಬ್ ಗೋಸ್ವಾಮಿಯಂತಹ ಪತ್ರಕರ್ತರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿದ್ದರು. ಅದೇ ಸಮಯದಲ್ಲಿ ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡರು. ‘ಟ್ರಾಕ್ಟರ್ ಟು ಟ್ವಿಟರ್’ ಎಂಬಂತಹ ವಿನೂತನ ಪ್ರಯೋಗಗಳನ್ನು ಮಾಡಿದರು. ವಿದ್ಯಾರ್ಥಿಗಳು ಮತ್ತು ಟೆಕ್ ಸಂಸ್ಥೆಗಳ ಉದ್ಯೋಗಿಗಳು ಇದನ್ನು ನಡೆಸಿದರು. ಹೀಗೆ ಎಲ್ಲ ವರ್ಗದ ಜನತೆ ಪಾಲ್ಗೊಂಡ ಬೃಹತ್ ಆಂದೋಲನವೇ ರೈತ ಚಳುವಳಿಯಾಗಿದೆ ಎಂದು ಅವರು ವಿವರಿಸಿದರು.







