ಬಸ್ ಢಿಕ್ಕಿಯಾಗಿ ಹಾನಿಗೆ ಒಳಗಾಗಿದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಮೈಸೂರಿಗೆ ಸ್ಥಳಾಂತರ
ಮಡಿಕೇರಿ ಆ.29 : ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಹಾನಿಗೆ ಒಳಗಾಗಿದ್ದ ವೀರ ಯೋಧ ಜನರಲ್ ಕೊಡಂದೇರ ಎಸ್.ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ದುರಸ್ತಿಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ.
ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಜನರಲ್ ತಿಮ್ಮಯ್ಯ ಅವರ ಪ್ರತಿಮೆಯ ದುರಸ್ತಿ ಕಾರ್ಯ ನಡೆಸಲಿದ್ದಾರೆ. ಪ್ರತಿಮೆ ಸ್ಥಾಪನೆಗೆ ಕಾರಣಕರ್ತರಾಗಿದ್ದ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಸಲಹೆ ಮೇರೆಗೆ ಪ್ರತಿಮೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಮಂಥರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟರಾಜು ಅವರುಗಳು ಪ್ರತಿಮೆಯನ್ನು ಶೀಘ್ರ ಮರು ಪ್ರತಿಷ್ಠಾಪಿಸುವಂತೆ ಸೂಚಿಸಿದ್ದರು.
ಶಿಲ್ಪಿ ಅರುಣ್ ಯೋಗಿ ರಾಜ್ ಪ್ರತಿಕ್ರಿಯೆ ನೀಡಿ ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಗೌರವವಿದೆ. ಮೂಲ ಸ್ವರೂಪಕ್ಕೆ ದಕ್ಕೆ ಬಾರದ ಹಾಗೆ ಮುಂದಿನ 25 ದಿನಗಳ ಒಳಗಾಗಿ ಪ್ರತಿಮೆಯನ್ನು ದುರಸ್ತಿ ಪಡಿಸಲಾಗುವುದು ಎಂದರು.
ತಿಮ್ಮಯ್ಯ ವೃತ್ತದಲ್ಲಿ ಪ್ರತಿಮೆಯ ಅಡಿಪಾಯದ ಬೃಹತ್ ಗಾತ್ರದ ಗ್ರಾನೈಟ್ ಶಿಲೆಯನ್ನು ಕೂಡ ಇದೇ ಸಂದರ್ಭ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸ್ಥಳಾಂತರಿಸಲಾಯಿತು. ಕ್ರೇನ್ ಬಳಸಿ ಕಂಚಿನ ಪ್ರತಿಮೆಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು.
ಪ್ರತಿಮೆ ಸ್ಥಳಾಂತರದ ಸಂದರ್ಭ ಮಡಿಕೇರಿ ಕೊಡವ ಸಮಾಜದ ನಿರ್ದೇಶಕಿ ಕನ್ನಂಡ ಕವಿತಾ, ಸದಸ್ಯರಾದ ಸಂಜು, ಅರುಣ್ ಯೋಗಿರಾಜ್ ತಂಡದ ಸದಸ್ಯ ಯಶವಂತ್ ಮತ್ತಿತ್ತರರು ಹಾಜರಿದ್ದರು.