ಪರಿಸರ ಸಂರಕ್ಷಣೆಯ ಮಾತನ್ನು ಸಾಲುಮರದ ತಿಮ್ಮಕ್ಕನವರು ಕೃತಿಯಲ್ಲಿ ತೋರಿಸಿದರು : ಡಾ.ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು : ಇಡೀ ನಾಡಿಗೆ ಹೊಸ ಆದರ್ಶವನ್ನು ರೂಪಿಸಿದ ಎಲ್ಲರ ಅಚ್ಚುಮೆಚ್ಚಿನ ತಾಯಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ನೋವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಸಾಲುಮರದ ತಿಮ್ಮಕ್ಕನವರ ಅಗಲಿಕೆಯು ವೈಯಕ್ತಿಕವಾಗಿ ನನಗೆ ಅಪಾರವಾದ ನಷ್ಟವಾಗಿದೆ. ತಿಮ್ಮಕ್ಕನವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದಂತವರು. ಬಹುಶಃ ಯಾರು ಕೂಡ ನಡೆಯದ ದಾರಿಯನ್ನು ಸೃಷ್ಟಿ ಮಾಡಿ, ಪರಿಸರ ಸಂರಕ್ಷಣೆಯ ಮಾತನ್ನು, ಕೃತಿಯಲ್ಲಿ ಮಾಡಿ ತೋರಿಸಿದವರು ಎಂದು ಹೇಳಿದರು.
ಅತ್ಯಂತ ಬಡ ಕುಟುಂಬದಿಂದ ಬಂದಂತ ಸಾಲುಮರದ ತಿಮ್ಮಕ್ಕ, ಮಕ್ಕಳಿಲ್ಲ ಎಂಬ ಕಾರಣಕ್ಕಾಗಿ ಗಿಡಗಳನ್ನು ನೆಡುವ ಮೂಲಕ ಅವೇ ತನ್ನ ಮಕ್ಕಳು ಎಂದು ಸಾಕಿದರು. ಜಗತ್ತಿಗೆ, ಪರಿಸರ ಕ್ಷೇತ್ರಕ್ಕೆ ಆದರ್ಶವನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಬ್ರೆಜಿಲ್ನಲ್ಲಿ ನಡೆದ ಅತಿದೊಡ್ಡ ಸಮಾವೇಶದಲ್ಲಿ, ಜಗತ್ತಿನಲ್ಲಿ ಪರಿಸರ ಹಾಳಾಗುತ್ತದೆ. ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳಾದವು. ಇದ್ಯಾವುದರ ಅರಿವಿಲ್ಲದೆ ಪರಿಸರ ಸಂರಕ್ಷಣೆಯ ಸಂದೇಶವನ್ನು ತಿಮ್ಮಕ್ಕನವರು ಜಗತ್ತಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಸಾಕುಮಗ ಉಮೇಶ್ ಆ ತಾಯಿಯನ್ನು ನಿಜವಾಗಿ ಸಾಕಿದ್ದಾನೆ. ಸರ್ಕಾರ ಎಲ್ಲ ರೀತಿಯ ಗೌರವಗಳನ್ನು ಸಮರ್ಪಣೆ ಮಾಡಲಿದೆ ಎಂದು ಹೇಳಿದರು.







