ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಮೇ ತಿಂಗಳಿನಿಂದ ಕೋವಿಡ್ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಡೆತ್ ಆಡಿಟ್ ವರದಿಯ ಪ್ರಕಾರ ಕೋವಿಡ್ ಪಾಸಿಟಿವ್ ಬಂದವರು ಇತರ ಮಾರಕ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೋವಿಡ್ ಪರಿಸ್ಥಿತಿ ಕುರಿತ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಬಂದವರಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ 10 ಜನರ ಡೆತ್ ಆಡಿಟ್ ರಿಪೋರ್ಟ್ ಬಂದಿದ್ದು, ಅವರೆಲ್ಲ ಇತರ ಮಾರಕ ಕಾಯಿಲೆಗಳಾದ ಹೃದಯ ಸಂಬಂಧಿ, ಕಿಡ್ನಿ, ಅಂಗಾಂಗ ವೈಫಲ್ಯದಂತಹ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದರು.
ಡೆತ್ ಆಡಿಟ್ ರಿಪೋರ್ಟ್ ಬಳಿಕವೇ ಕೋವಿಡ್ ಡೆತ್ ರಿಪೋರ್ಟ್ ಘೋಷಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಡೆತ್ ಎಂದಾಕ್ಷಣ ಅನಗತ್ಯವಾಗಿ ಜನರು ಆತಂಕಕ್ಕೆ ಒಳಗಾಗುವುದು ಸಹಜ. ಆದರೆ ವಾಸ್ತವ ಚಿತ್ರಣ ಬೇರೆಯೇ ಆಗಿರುತ್ತದೆ. ಈಗಿರುವ ಕೋವಿಡ್ ರೂಪಾಂತರಿ ವೈರಸ್ ಸೌಮ್ಯ ಸ್ವಭಾವದ್ದಾಗಿದೆ. 500ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ ಇಬ್ಬರು ಮಾತ್ರ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆತಂಕದ ಸ್ಥಿತಿ ಇಲ್ಲ ಎಂದು ಅವರು ಹೇಳಿದರು.
ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. 10 ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡಲಾಗಿದೆ. ತೀವ್ರ ಉಸಿರಾಟದ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತಜ್ಞರ ಸಮಿತಿ ಸಭೆಗಳನ್ನು ನಡೆಸುತ್ತಿದ್ದು, ಆರೋಗ್ಯ ಇಲಾಖೆ ಮೇಲ್ವಿಚಾರಣೆ ನಡೆಸುತ್ತಿದೆ. ಕೋವಿಡ್‍ಗೆ ಆತಂಕಗೊಳ್ಳದೇ ಜನರು ತಮ್ಮ ಸಹಜ ಜೀವನ ನಡೆಸಬಹುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.







