ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಯಾವುದೇ ಗೊಂದಲವಿಲ್ಲ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಡಿ.ಕೆ.ಶಿವಕುಮಾರ್ (Photo:X)
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಯಾವುದೇ ಗೊಂದಲ, ತೊಂದರೆಗಳು ಉಂಟಾಗಿಲ್ಲ. ಈ ಹಿಂದೆ ಅನೇಕ ಸಮುದಾಯಗಳು ನಮ್ಮನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ ಎಂದು ದನಿ ಎತ್ತಿದ್ದರು. ಇದೀಗ ಎಲ್ಲರಿಗೂ ಅವಕಾಶ ಸಿಕ್ಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ನಾವು ಎಲ್ಲರಲ್ಲಿಯೂ ಮನವಿ ಮಾಡುತ್ತಿದ್ದೇವೆ. ಸಂಘ-ಸಂಸ್ಥೆಗಳು, ವಿವಿಧ ಸಮುದಾಯದ ಮುಖಂಡರು ತಮ್ಮ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ನಿಮ್ಮ ಸಮುದಾಯಗಳ ಬಗ್ಗೆ ಬರೆಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನೀವೇ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಸಮೀಕ್ಷೆಯ ಬಗ್ಗೆ ಯಾರೋ ಇಬ್ಬರು ವಿರೋಧ ಮಾಡುತ್ತಾರೆ. ವಿಶೇಷ ಚೇತನರಿಗೆ ಬುದ್ದಿವಂತಿಕೆ ಹೆಚ್ಚು ಎಂದ ಅವರು, ನಾನು ಯಾವುದೇ ಸಮುದಾಯದ ಸಭೆಗೆ ಕರೆದರೂ ಹೋಗುತ್ತೇನೆ. ನನಗೆ ಯಾವುದೇ ಜಾತಿಯಿಲ್ಲ. ನಾನು ಎಲ್ಲರಿಗೂ ಬೇಕಾದವನು. ಒಕ್ಕಲಿಗರ ಪರವಾಗಿ ಮಾತ್ರ ಇರಬೇಡಿ ಎಂದು ಒಕ್ಕಲಿಗರ ಸಭೆಯಲ್ಲಿ ನಾನು ಹೇಳಿದ್ದೇನೆ. ಇತರೇ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳ ಬಗ್ಗೆ ನಮಗೆ ಏನು ತಿಳಿದಿರುತ್ತದೆ. ಅದಕ್ಕೆ ಅವರುಗಳು ಏನಾದರೂ ಮಾಹಿತಿ ನೀಡಲಿ ಎಂದು ಹೇಳಿದ್ದೇನೆ ಎಂದು ಹೇಳಿದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ ಸಂಬಂಧ ಸರಕಾರ ನಿರ್ಧಾರ ಮಾಡಲಿದೆ. ಯಾವುದೇ ಕೆಲಸ ಪ್ರಾರಂಭದಲ್ಲಿ ಸ್ವಲ್ಪ ನಿಧಾನವಾಗಿರುತ್ತದೆ. ಒಂದು ಹಂತಕ್ಕೆ ಬಂದ ನಂತರ ಉತ್ತಮ ಸ್ಥಿತಿಗೆ ಬರುತ್ತದೆ. ಆನಂತರ ಎಲ್ಲವೂ ಸರಿ ಹೋಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಸಮೀಕ್ಷೆ ವಿಳಂಬದ ಕುರಿತು ಸಮರ್ಥನೆ ನೀಡಿದರು.







