ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ಸುರ್ಜೇವಾಲ
"ಸರಕಾರದ ಕೆಲಸದ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ದಿಲ್ಲಿ ಭೇಟಿ"

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (PTI)
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ಈಗಾಗಲೇ ನಾವು ಸ್ಪಷ್ಟಣೆ ನೀಡಿದ್ದೇವೆ. ಕೆಲವರಿಗೆ ಆಸೆ ಇರಬಹುದು. ಆದರೆ, ಈಗ ಆ ವಿಚಾರ ಅಪ್ರಸ್ತುತ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನೂ ಮೂರು ತಿಂಗಳಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂದು ಆಡಳಿತ ಪಕ್ಷದ ಶಾಸಕರ ಪೈಕಿ ಕೆಲವರು ಹೇಳಿಕೆಗಳು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ದಿಲ್ಲಿಗೆ ಹೋಗಲು ಯಾವುದೇ ನಿರ್ಬಂಧವಿಲ್ಲ. ರಾಜ್ಯದ ಪರವಾಗಿ ಮಾತನಾಡಲು ದಿಲ್ಲಿಗೆ ಹೋಗಿದ್ದಾರೆ. ರಾಜ್ಯದ ಜನರ ವಿರುದ್ಧ ತಾರತಮ್ಯ ಮಾಡಬೇಡಿ ಎಂದು ಕೇಂದ್ರ ಸರಕಾರಕ್ಕೆ ಹೇಳಲು ಹೋಗಿದ್ದಾರೆ. ಅದು ಅವರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಶಾಸಕರೊಂದಿಗೆ ಸರಣಿ ಸಭೆ: ಶಾಸಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಅವರ ಅಹವಾಲುಗಳನ್ನು ಆಲಿಸಲಾಗುತ್ತಿದೆ. ಅಲ್ಲದೇ, ಎರಡು ವರ್ಷಗಳಿಂದ ಅವರ ಸಾಧನೆ, ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಮುಂದಿನ ಯೋಜನೆಗಳು ಹಾಗೂ ಗ್ಯಾರಂಟಿಗಳ ಅನುಷ್ಠಾನದ ವಿಚಾರದಲ್ಲಿ ಜಿಲ್ಲಾ, ತಾಲೂಕು ಮಟ್ಟದ ಸಮಿತಿಗಳ ಕಾರ್ಯವೈಖರಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಷ್ಟೇ, ಅಲ್ಲದೇ, ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ವಿಚಾರವಾಗಿಯೂ ಶಾಸಕರ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ಸುರ್ಜೇವಾಲ ಹೇಳಿದರು.
ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಕೊಡಲು ಹೇಳಿದ್ದೇನೆ: ನಮ್ಮ ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದಷ್ಟು ಇರುಸು ಮುರುಸು ಅನುಭವಿಸುತ್ತಿದ್ದಾರೆ. ಆದುದರಿಂದ, ಅವರ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಡಿರುವ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಣದೀಪ್ ಸಿಂಗ್ ಸುರ್ಜೇವಾಲ, ಮೊದಲು ಆತ ಅಮೆರಿಕಾದಲ್ಲಿ ಆದ ಅವಮಾನದ ಬಗ್ಗೆ ಉತ್ತರ ನೀಡಲಿ. ಇದು ಅವರಿಗೆ ಮಾತ್ರ ಆದ ಅವಮಾನವಲ್ಲ, ದೇಶಕ್ಕಾದ ಅಪಮಾನ. ಅಪಮಾನ ಅನುಭವಿಸಿದರೂ ಯಾಕೆ ಸುಮ್ಮನಿದ್ದಾರೆ ಎಂದು ಕೇಳಿ ಎಂದರು.







