ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ; ಸಿದ್ದರಾಮಯ್ಯ ಅವರಿಂದ ಸಮರ್ಥ ಆಡಳಿತ : ಬೈರತಿ ಸುರೇಶ್

ಕೋಲಾರ : ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆ ಹುದ್ದೆಯನ್ನು ತೆಗೆದು ನಮಗೆ ಕೊಡಿ ಎಂದು ಯಾರೂ ಕೇಳುತ್ತಿಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ಎಲ್ಲವೂ ಊಹಾಪೋಹದ ಸುದ್ದಿ ಎಂದರು.
ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಹುದ್ದೆಯನ್ನು ಕೇಳಲು ಎಲ್ಲರಿಗೂ ಹಕ್ಕಿದೆ. ಹೀಗಾಗಿ ದಲಿತ ಸಿಎಂ ಆಗಬೇಕೆಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಸಿದ್ದರಾಮಯ್ಯ ಅವರು ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ನಾನು ಸೇರಿದಂತೆ ಎಲ್ಲರೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಯಾವುದೇ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ನಮ್ಮ ಸಮರ್ಥವಾಗಿರುವ ಹೈಕಮಾಂಡ್ ಕೈಗೊಳ್ಳಲಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಅಭಿಪ್ರಾಯ ಮಂಡಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದರಂತೆ ನಮ್ಮ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಇದರ ನೆಲೆಗಟ್ಟಿನಲ್ಲಿ ಹೈಕಮಾಂಡ್ ಸಮರ್ಥ ನಿರ್ಧಾರ ಕೈಗೊಳ್ಳುತ್ತದೆ ಎಂದು ಪುನರುಚ್ಚರಿಸಿದರು.







