ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ: ಗೃಹ ಸಚಿವ ಜಿ.ಪರಮೇಶ್ವರ

ಬೆಂಗಳೂರು, ಜುಲೈ 29: ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ. ಅವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ತೀರ್ಮಾನ ಮಾಡುವವರು ಎಐಸಿಸಿ ಅಧ್ಯಕ್ಷರು. ಹಾಗಾಗಿ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೀವಿ ಅಂತ ಹೇಳಿದರೆ, ತಪ್ಪು ಅಂತ ಯಾರು ಅರ್ಥೈಸಬಾರದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ.
ಕೆಲವರು ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬರಲಿ. ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಗೃಹ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಈವರೆಗೆ ಮಾತಾಡಿರುವವರು, ಅವರ ಹಂತಕ್ಕೆ ತಲುಪಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೇ ಅಲ್ಲದೆ, ಇಡೀ ರಾಷ್ಟ್ರ ರಾಜಕಾರಣದಲ್ಲಿ ಖರ್ಗೆಯವರು ಹಿರಿಯ ಮುಖಂಡರು. ಅದನ್ನು ಪರಿಗಣಿಸಬೇಕಾಗುತ್ತದೆ. ಅವರ ಹೇಳಿಕೆಯ ಮೇಲೆ ಟೀಕೆ ಮಾಡುವುದು ಅಷ್ಟೊಂದು ಸರಿಯಲ್ಲ. ಎಲ್ಲ ಹುದ್ದೆಗಳಿಗೂ ಅವರು ಸಮರ್ಥರಿದ್ದಾರೆ. ಸುದೀರ್ಘವಾದ 50 ವರ್ಷದ ರಾಜಕಾರಣ ಮಾಡಿರುವುದರಿಂದ ಅಪಾರವಾದ ಅನುಭವವಿದೆ ಎಂದು ಹೇಳಿದರು.
ಸಭೆಯ ನಡೆಸುವ ಕುರಿತು ಎಐಸಿಸಿ ಅಧ್ಯಕ್ಷರು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಹೇಳದಿದ್ದರೆ ಮತ್ತೇನು ಹೇಳುತ್ತಾರೆ. ಸಭೆ ನಡೆಸಲು ಅವರು ಸೂಚನೆ ಕೊಟ್ಟಿದ್ದರೆ ತಪ್ಪೇನು ಇಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಎಂದುಕೊಂಡು ಜನಗಳ ಮುಂದೆ ಹೋಗಿದ್ದೇವೆ. ಆಗ ಜನಗಳಿಗೆ ಭರವಸೆಗಳನ್ನು ಕೊಟ್ಟಿದ್ದೇವೆ. ಅದೆಲ್ಲವನ್ನು ಪಕ್ಷ ರೆಗ್ಯೂಲೆಟ್ ಮಾಡಬೇಕಲ್ಲವೆ. ಅವರು ಕೇಳುವುದರಲ್ಲಿ ತಪ್ಪೇನಿದೆ ಎಂದರು.
ಮುಂದಿನ ಎರಡೂವರೆ ವರ್ಷಗಳಲ್ಲಿ ಕ್ಷೇತ್ರವಾರು ಏನೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂಬುದರ ಕುರಿತು ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಮುಖ್ಯಮಂತ್ರಿಯವರು ಇಂದಿನಿಂದ ನಮ್ಮ ಪಕ್ಷದ ಶಾಸಕರುಗಳ ಜೊತೆ ಜಿಲ್ಲಾವಾರು ಕರೆದು ಸಭೆ ನಡೆಸಲಿದ್ದಾರೆ. ಶಾಸಕರುಗಳಿಗೆ 50 ಕೋಟಿ ರೂ. ಅನುದಾನ ನೀಡಲು ತೀರ್ಮಾನ ಮಾಡಿದ್ದಾರೆ. ಬೇರೆ ಅಭಿವೃದ್ಧಿ ಕಾರ್ಯಗಳು, ಪಕ್ಷದ ಸಂಘಟನೆಯ ಬಗ್ಗೆ ಮಾತನಾಡುತ್ತಾರೆ. ಇದು ಹೊಸದೇನು ಅಲ್ಲ. ಹಿಂದೆಯೂ ಕೂಡ 2013 ರಿಂದ 2018ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದರು. ನಾನು ಆಗ ಅಧ್ಯಕ್ಷನಾಗಿದ್ದೆ. ನಾವೆಲ್ಲ ಶಾಸಕರುಗಳ ಜೊತೆ ಸಮಸ್ಯೆಗಳನ್ನು ಆಲಿಸಿದ್ದೆವು ಎಂದು ಹೇಳಿದರು.
ಐದು ವರ್ಷದ ಅವಧಿಯಲ್ಲಿ ಮಧ್ಯಕ್ಕೆ ಬಂದಿದ್ದೇವೆ. ಇದು ಬಹಳ ಮುಖ್ಯ ವಿಷಯ. ಮುಂದಿನ ಎರಡುವರೆ ವರ್ಷಗಳಲ್ಲಿ ಕ್ಷೇತ್ರವಾರು ಏನೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ಚರ್ಚೆ ಮಾಡಲಾಗುತ್ತದೆ. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಇರುತ್ತಾರೆ ಎಂದರು.
ಧರ್ಮಸ್ಥಳ ವಿಚಾರದ ಕುರಿತು ಮಾತನಾಡಿ, ಎಸ್ಐಟಿ ತನಿಖೆ ಮುಂದುವರಿಯುತ್ತದೆ. ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಮೊದಲೇ ಹೇಳಿದ್ದೇನೆ. ತನಿಖೆಯ ಮಧ್ಯದಲ್ಲಿ ಯಾರು, ಏನು ಹೇಳಿಕೆ ಕೊಡಲು ಆಗುವುದಿಲ್ಲ ಎಂದರು.







