ಎಲ್ಲ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಹಣೆಯಲ್ಲಿ ಸಮಾನ ಅಧಿಕಾರ ಇರಬೇಕು: ಡಾ.ಸೈಯದ್ ನಾಸಿರ್ ಹುಸೇನ್

ಡಾ.ಸೈಯದ್ ನಾಸಿರ್ ಹುಸೇನ್
ಬೆಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಎಲ್ಲ ಧರ್ಮಗಳ ಧಾರ್ಮಿಕ ಸಂಸ್ಥೆಗಳು ಮತ್ತು ಆಸ್ತಿಗಳಿಗೆ ಸಂಬಂಧಿಸಿದ ಆಡಳಿತ ನಿರ್ವಹಣೆಯಲ್ಲಿ ಸಮಾನ ಅಧಿಕಾರ ಇರಬೇಕು ಎಂಬುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಪಾರ್ಸಿಗಳು, ಜೈನರು ಮತ್ತು ಬೌದ್ಧರ ಎಲ್ಲ ಧಾರ್ಮಿಕ ಸಂಸ್ಥೆಗಳು ಸಮಾನ ನಿಯಮಗಳನ್ನು ಹೊಂದಿರಬೇಕು. ಯಾವುದೇ ವ್ಯತ್ಯಾಸ ಇರಬಾರದು. ನಾವು ಸಮಾನತೆಯ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆಯು ಒಂದು ಸಮುದಾಯವನ್ನು ಗುರಿಯನ್ನಾಗಿಸಿಕೊಂಡಿರುವ ಹಾಗೂ ಅನ್ಯಾಯದಿಂದ ಕೂಡಿರುವ ಕಾಯ್ದೆಯಾಗಿದೆ ಎಂದು ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದೇವೆ. ಸಮಾಜದಲ್ಲಿ ಅನಗತ್ಯವಾಗಿ ತಾರತಮ್ಯ, ಗಲಭೆಗಳು ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಲು ಈ ಕಾಯ್ದೆಯಲ್ಲಿ ಕೆಲವು ನಿಬಂಧನೆಗಳನ್ನು ಸೇರಿಸಲಾಗಿತ್ತು ಎಂದು ಅವರು ದೂರಿದರು.
ವಕ್ಫ್ ಆಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿದ್ದನ್ನು ನಾವು ಪ್ರಶ್ನಿಸಿದ್ದೆವು. ಅದಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ತಡೆ ಹಿಡಿಯಲಾಗಿದೆ. ಇದು ಗಲಭೆಗಳು ಅಥವಾ ಅವ್ಯವಸ್ಥೆಯ ಸಾಧ್ಯತೆಯನ್ನು ನಿವಾರಿಸಿದೆ ಎಂದು ನಾಸಿರ್ ಹುಸೇನ್ ತಿಳಿಸಿದರು.
ವಿಧೇಯಕದ ಕುರಿತು ಪೂರ್ಣ ಪ್ರಮಾಣದ ವಾದ, ಪ್ರತಿವಾದ ನಡೆದಾಗ ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿ, ಈ ವಿಧೇಯಕದಲ್ಲಿರುವ ಎಲ್ಲ ನ್ಯೂನತೆಗಳನ್ನು ನ್ಯಾಯಾಲಯದ ಮುಂದಿರಸಲಿದ್ದಾರೆ. ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾದ ಹಕ್ಕುಗಳ ರಕ್ಷಣೆಯಾಗಬೇಕು. ಮತ್ತು ಈ ಕಾಯ್ದೆ ಸಂವಿಧಾನದ ಚೌಕಟ್ಟಿನೊಳಗಿರಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ಹೇಳಿದರು.







