ಮಾಜಿ ಶಾಸಕನ ಬೆಂಬಲಿಗರಿಂದ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ: ಸ್ಪೀಕರ್ ಗೆ JDS ಶಾಸಕಿ ಮನವಿ
"ಅಧಿಕಾರಿಗಳು ಶಿಷ್ಟಾಚಾರಕ್ಕಾದರೂ ನನಗೆ ಗೌರವ ಕೊಡುತ್ತಿಲ್ಲ''

ಬೆಂಗಳೂರು, ಜು.13: ಕ್ಷೇತ್ರದಲ್ಲಿ ಅಧಿಕಾರಿಗಳು ನಾನು ಶಾಸಕಿ ಆಗಿದ್ದರೂ ಶಿಷ್ಟಾಚಾರಕ್ಕಾದರೂ ಗೌರವ ಕೊಡುತ್ತಿಲ್ಲ. ಅವರ ತಲೆಯಲ್ಲಿಯೇ ನಾನು ಶಾಸಕಿ ಎಂದು ಪರಿಗಣಿಸಿಲ್ಲ. ಮಾಜಿ ಶಾಸಕನ ಬೆಂಬಲಿಗರಿಂದ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ್ ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವದುರ್ಗದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಇಸ್ಪೀಟ್ ದಂಧೆ, ಮಟ್ಕಾಗೆ ಕಡಿವಾಣ ಹಾಕಬೇಕಿದೆ. ಆದರೆ ಅಲ್ಲಿನ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನನ್ನ ಮಾತಿಗೆ ಸ್ಪಂದನೆ ತೋರುತ್ತಿಲ್ಲ. ಜನರೇ ಮಟ್ಕಾ ಬರೆಯುವವರನ್ನು ಹಿಡಿದುಕೊಟ್ಟರೆ 300 ರೂ. ದಂಡ ಹಾಕಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದರು.
ಕ್ಷೇತ್ರದ ಮಾಜಿ ಶಾಸಕರ ಬೆಂಬಲಿಗರಿಂದ ನನಗೆ ಆತಂಕವಿದೆ. ವಿಧಾನಸಭೆಯಲ್ಲೂ ನನ್ನ ಸೀಟಿನಲ್ಲಿ ಬೇರೊಬ್ಬ ವ್ಯಕ್ತಿ ಬಂದು ಕುಳಿತುಕೊಂಡಿದ್ದರು ಎಂದ ಅವರು, ಇತ್ತೀಚಿಗೆ ನನ್ನ ತಮ್ಮನ ಮಗನ ಮೇಲೆ ಹಲ್ಲೆ ನಡೆದಿದೆ. ಇದು ಮರಳು ಮಾರುವವರಿಂದ ಹಲ್ಲೆಯಾಗಿದೆ. ಆತ 24 ವರ್ಷದ ಹುಡುಗ. ಶಾಸಕಿಯಾದರೂ ಕ್ಷೇತ್ರದಲ್ಲಿ ನನಗೆ ಭಯವಿದೆ ಎಂದು ತಿಳಿಸಿದರು.
ನಾನು ನನ್ನ ಜನರ ಪರವಾಗಿ ಕೆಲಸ ಮಾಡಬೇಕು. ಅವರಿಗೆ ಒಳ್ಳೆಯದು ಮಾಡಬೇಕು. ಇಲ್ಲದಿದ್ದರೆ ನಾನು ಗೆದ್ದಿದ್ದಕ್ಕೆ ಅರ್ಥ ಇಲ್ಲ. ಮಾಜಿ ಶಾಸಕರು ತೊಂದರೆ ಕೊಡುತ್ತಿದ್ದಾರೆ. ನನ್ನ ವಿಧಾನಸಭೆಯ ಆಸನದಲ್ಲೂ ಅನಾಮಿಕನೊಬ್ಬ ಬಂದು ಕುಳಿತು ಹೋಗಿದ್ದಾರೆ. ಇದೆಲ್ಲಾ ನೋಡಿದರೆ ಏನೋ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನನಗೆ ಭದ್ರತೆ ಕೊಡಬೇಕು. ನನ್ನ ರಕ್ಷಣೆಗೆ ಬರಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಅದು ಅಲ್ಲದೆ, ಮಾಜಿ ಶಾಸಕರು ಮುಂದಿನ 6 ತಿಂಗಳಲ್ಲಿ ಚುನಾವಣೆ ಮಾಡಿಸುತ್ತೇನೆ ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. ನನಗೆ ರಕ್ಷಣೆ ಕೊಡಿ. ನಾನು ಈ ಹಿಂದೆ ಅಕ್ರಮ ಮರಳು ಸಾಗಿಸುವ ಲಾರಿಯನ್ನು ತಡೆದಿದ್ದೆ. ಲಾರಿ ಹತ್ತಿಸಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಜನರಿಗಾಗಿ ನಾನು ಸಾಯುತ್ತೇನೆ. ಇದಕ್ಕೆಲ್ಲ ಹೆದರುವುದಿಲ್ಲ ಎಂದು ಅವರು ನುಡಿದರು.
''ನಿಮಗೆ ಯಾವುದೇ ಆತಂಕ ಬೇಡ. ನಾವು ನಿಮ್ಮ ರಕ್ಷಣೆಗೆ ಇದ್ದೇವೆ. ಗೃಹ ಸಚಿವರ ಜೊತೆ ನಾನು ಮಾತನಾಡ್ತೇನೆ'' ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಇದೇ ವೇಳೆ ಭರವಸೆ ನೀಡಿದರು.