ಅಧಿವೇಶನ | ಕರ್ನಾಟಕ ಗಿರವಿದಾರರ ತಿದ್ದುಪಡಿ ವಿಧೇಯಕ ಸೇರಿ ಮೂರು ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು : ಲೈಸೆನ್ಸ್ ಯುಕ್ತ ಗಿರವಿದಾರ ಮತ್ತು ಲೈಸೆನ್ಸ್ ರಹಿತ ಗಿರವಿದಾರರು ನೀಡುವ ದುಬಾರಿ ಬಡ್ಡಿದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪುಗಳನ್ನು ಹಾಗೂ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶದ 2025ನೇ ಸಾಲಿನ ಕರ್ನಾಟಕ ಗಿರವಿದಾರರ (ತಿದ್ದುಪಡಿ ವಿಧೇಯಕ) ಸೇರಿದಂತೆ ಮೂರು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಸೋಮವಾರ ವಿಧಾನಸಭೆಯಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಅಂಗೀಕರಿಸಬೇಕೆಂದು ಕೋರಿದ 2025ನೆ ಸಾಲಿನ ಕರ್ನಾಟಕ ಗಿರವಿದಾರರ ತಿದ್ದುಪಡಿ ವಿಧೇಯಕವನ್ನು ತಿದ್ದುಪಡಿಯೊಂದಿಗೆ, 2025ನೆ ಸಾಲಿನ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ (ತಿದ್ದುಪಡಿ) ವಿಧೇಯಕ ಹಾಗೂ 2025ನೆ ಸಾಲಿನ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿಯೊಂದಿಗೆ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಇದಕ್ಕೂ ಮುನ್ನ ವಿಧೇಯಕಗಳನ್ನು ಕುರಿತು ಮಾತನಾಡಿದ ಕೆ.ಎನ್.ರಾಜಣ್ಣ, ಗಿರವಿದಾರರ ತಿದ್ದುಪಡಿ ವಿಧೇಯಕವು ಬಲವಂತದ ವಸೂಲಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ. 1 ಸಾವಿರ ದಂಡ ಇರುವುದನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. 6 ತಿಂಗಳ ಶಿಕ್ಷೆಯನ್ನು 10 ವರ್ಷಗಳಿಗೆ ಹೆಚ್ಚಿಸಲಾಗಿದೆ. 1 ತಿಂಗಳು ಎಂಬುದರ ಬದಲಾಗಿ 3 ವರ್ಷ ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಉಲೇಖಿಸಿದರು.
ಈ ಮೂರು ವಿಧೇಯಕಗಳಿಗೂ ಪ್ರತ್ಯೇಕವಾಗಿ ಅಂಗೀಕರಿಸಬೇಕೆಂದು ಸಚಿವರು ಕೋರಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಮೂರು ವಿಧೇಯಕಗಳನ್ನೂ ಪ್ರತ್ಯೇಕವಾಗಿ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.







