ಹುಲಿ ಉಗುರು ಪ್ರಕರಣ: ಅಮಾನತುಗೊಂಡ ಬೆನ್ನಲ್ಲೇ ಅರಣ್ಯ ಅಧಿಕಾರಿಯ ಬಂಧನ

ದರ್ಶನ್ - ಬಂಧಿತ ಅಧಿಕಾರಿ
ಚಿಕ್ಕಮಗಳೂರು : ಹುಲಿ ಉಗುರು ಇರುವ ಲಾಕೆಟ್ ಧರಿಸಿದ್ದ ಆರೋಪದಲ್ಲಿ ಕರ್ತವ್ಯದಿಂದ ಅಮಾನತುಗೊಂಡ ಬೆನ್ನಲ್ಲೇ ಕಳಸ ಉಪ ವಲಯ ಅರಣ್ಯಾಧಿಕಾರಿ (ಡಿ.ಆರ್.ಎಫ್.ಓ.) ದರ್ಶನ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಳಸ ಅರಣ್ಯ ವಿಭಾಗದ ಡಿಆರ್ ಎಫ್ಓ ದರ್ಶನ್ ಅವರು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದವರಾಗಿದ್ದು, ಹುಲಿ ಉಗುರು ಇದ್ದ ಲಾಕೆಟ್ ಧರಿಸಿದ್ದ ಪೊಟೊಗಳನ್ನು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೆಲ ತಿಂಗಳ ಹಿಂದೆಯೇ ಹಾಕಿದ್ದರು. ಈ ಪೊಟೊಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಲ್ದೂರು ಹೋಬಳಿಯ ಅರೇನೂರು ಗ್ರಾಮದವರಾದ ಅಬ್ದುಲ್ ಅಹ್ಮದ್ ಹಾಗೂ ಸುಪ್ರಿತ್ ಎಂಬವರು ಗುರುವಾರ ಆಲ್ದೂರು ಆರ್ ಎಫ್ಒ ಅವರಿಗೆ ದೂರು ನೀಡಿ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಕಳಸ ಡಿಆರ್ಎಫ್ಒ ದರ್ಶನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ವಿಚಾರಣೆಗೆ ನೋಟಿಸ್ ಜಾರಿ ಮಾಡಿದ್ದರೂ ಶುಕ್ರವಾರ ಅರಣ್ಯಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗದ ಅಧಿಕಾರಿ ದರ್ಶನ್ ನಾಪತ್ತೆಯಾಗಿ ತಲೆ ಮರೆಸಿಕೊಂಡಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪ ಡಿಎಫ್ಒ ನಂದೀಶ್ ಅವರು ಅಧಿಕಾರಿ ದರ್ಶನ್ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಲ್ಲದೇ, ದರ್ಶನ್ ಪತ್ತೆಗಾಗಿ ಬಾಳೆಹೊನ್ನೂರು ಎಸಿಎಫ್ ಚೇತನ್ ಗಸ್ತಿ, ಕಳಸ ಆರ್ ಎಫ್ಒ ನಿಶ್ಚಿತಾ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಿದ್ದರು. ಅಮಾನತಾಗಿದ್ದ ಅಧಿಕಾರಿ ದರ್ಶನ್ ಪತ್ತೆಗಾಗಿ ತನಿಖೆ ನಡೆಸಿದ ಈ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ ಜಿಲ್ಲೆಯ ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ದರ್ಶನ್ ಅವರನ್ನು ಬಂಧಿಸಿ, ಕೊಪ್ಪ ಡಿಎಫ್ಒ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಹುಲಿ ಉಗುರು ಪ್ರಕರಣ ಸಂಬಂಧ ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಹುಲ್ಲೇಮನೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಅರಣ್ಯಾಧಿಕಾರಿಗಳ ತಂಡ, ಗುರುವಾರ ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನದ ಇಬ್ಬರು ಅರ್ಚಕರನ್ನು ಬಂಧಿಸಿದ್ದರು. ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿ ದರ್ಶನ್ ಅವರನ್ನು ಬಂಧಿಸಿದ್ದು, ಹುಲಿ ಉಗುರಿನ ಪ್ರಕರಣದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 5ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಬಂಧಿಸಿದಂತಾಗಿದ್ದು, ತಲೆ ಮರೆಸಿಕೊಂಡಿರುವ ಮೂಡಿಗೆರೆ ಹುಲ್ಲೇಮನೆ ಗ್ರಾಮದ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.







