ಜಾತಿ ಹೋಗಬೇಕಾದರೆ ವಿದ್ಯಾವಂತರು ವೈಚಾರಿಕ ಚಿಂತನೆ ಮಾಡುವುದನ್ನು ಕಲಿಯಬೇಕು: ಸಿದ್ದರಾಮಯ್ಯ

ಬೆಂಗಳೂರು: ಪಟ್ಟಭದ್ರ ಹಿತಾಸಕ್ತಿಗಳು ನಮ್ಮನ್ನು ಒಂದಾಗಲು ಬಿಡುವುದಿಲ್ಲ. ಜಾತಿ ಹೋಗಬೇಕಾದರೆ ವಿದ್ಯಾವಂತರು ವೈಜ್ಞಾನಿಕ, ವೈಚಾರಿಕ ಚಿಂತನೆ ಮಾಡುವುದನ್ನು ಕಲಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಶೂದ್ರ ಸೇವಾ ಸಂಘ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಪೀಳಿಗೆ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳದಿದ್ದರೆ ಸಮಾನತೆಯ ಸಮಾಜ ನಿರ್ಮಾಣ ಅಸಾಧ್ಯ. ಜಾತಿ ವ್ಯವಸ್ಥೆಯೂ ಹೋಗದು ಎಂದು ತಿಳಿಸಿದರು.
ಜಾತಿ ವ್ಯವಸ್ಥೆ ಮೂಲಕ ಯಾರನ್ನೂ ಕೀಳಾಗಿ ಕಾಣಬಾರದು. ಚಾತುರ್ವರ್ಣ ವ್ಯವಸ್ಥೆಯನ್ನು ಮನುವಾದಿಗಳು ಈ ದೇಶದಲ್ಲಿ ಉದ್ದೇಶಪೂರ್ವಕಾಗಿ ಸೃಷ್ಟಿ ಮಾಡಿದರು. ಜಾತಿ ವ್ಯವಸ್ಥೆ ಹೋಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣ ಆಗಬೇಕು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಶೂದ್ರ ವರ್ಗದವರು ಮೇಲ್ವರ್ಗದವರ ಜೊತೆ ಸ್ಪರ್ಧೆ ಮಾಡುವುದು ಅಸಾಧ್ಯ. ಅಕ್ಷರ ವಂಚಿತರಿಗೆ ಅಕ್ಷರ ಕಲಿತವರಿಂದ ಸೋಲಾಗುವುದು ಸಾಮಾನ್ಯ. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳ ಪರಿಣಾಮ ಬ್ರಿಟಿಷರು ನಮ್ಮನ್ನು ಆಳಿದರು. ಹೀಗಾಗಿ ಭಿನ್ನಾಭಿಪ್ರಾಯ ಮರೆತು ಎಲ್ಲ ವರ್ಗಗಳು ಒಂದಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಅಸಮಾನತೆ ತೊಲಗಿ ಸಮ ಸಮಾಜ ನಿರ್ಮಾಣ ಆಗಬೇಕು ಎಂಬುದು ಸಂವಿಧಾನದ ಆಶಯ. ಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದೂ ಇದನ್ನೇ ಎಂದು ಅವರು ತಿಳಿಸಿದರು.
‘ಶೂದ್ರ ಸೇವಾ ಸಂಘ’ದ ಅಧ್ಯಕ್ಷ ಬಿ.ಆರ್.ರಾಮೇಗೌಡ ಮಾತನಾಡಿ, ಎಲ್ಲ ಶೂದ್ರರು ಅಭಿವೃದ್ಧಿ ಹೊಂದಬೇಕಾದರೆ ಜಾಗೃತಿ ಮತ್ತು ಸಂಘಟನೆ ಮುಖ್ಯ. ಜಾಗೃತಿ ಮೂಡಿಸುವುದು ಕೂಡ ಬಹಳ ಕಷ್ಟವಾಗಿದೆ. ಶೂದ್ರರು ಲೇಖನ ಬರೆದರೆ ಯಾವ ಪತ್ರಿಕೆ ಕೂಡ ಪ್ರಕಟ ಮಾಡುವುದಿಲ್ಲ ಎಂದರು.
ಆರೆಸ್ಸೆಸ್‍ನವರು ಸ್ವಾತಂತ್ರ್ಯಕ್ಕಾಗಿ ಹೋರಾಟವೇ ಮಾಡಲಿಲ್ಲ. ಆದರೆ ಸ್ವಾತಂತ್ರ್ಯ ಬಂದ ಮೇಲೆ ಶೇ.100ಕ್ಕೆ 80ರಷ್ಟು ಪ್ರಧಾನ ಮಂತ್ರಿಗಳಾದವರು ಯಾರು? ಬ್ರಾಹ್ಮಣರೇ ದೇಶದ ಜನರಿಗೆ ಈ ಪರಿಜ್ಞಾನ ಇದೆಯಾ? ರಾಜಕಾರಣ ಅಷ್ಟೇ ಅಲ್ಲ. ಉದ್ಯೋಗದಲ್ಲಿಯೂ ಅವರದೇ ಮೇಲುಗೈ. ಹಿಂದುಳಿದವರಿಗೆ ಉದ್ಯೋಗಾವಕಾಶ ಸಿಗಬೇಕು ಎಂದು ಮಂಡಲ್ ಆಯೋಗ ಮಾಡಲಾಯಿತು. ಆವಾಗ ಮಂಡಲ್ ಆಯೋಗವನ್ನು ವಿರೋಧಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶೂದ್ರ ಸೇವಾ ಸಂಘದ ಸಂಚಾಲಕ ಮುರಳೀಧರ ಹಾಲಪ್ಪ, ರೇಖಾ ಜಗನ್ನಾಥ ಮತ್ತಿತರರು ಉಪಸ್ಥಿತರಿದ್ದರು.






