ನಾಳೆ(ಅ.26) ಕಬ್ಬು ಬೆಳೆಗಾರರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಭೆ

ಬೆಂಗಳೂರು : ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದರೂ, ರೈತರ ಬೇಡಿಕೆಗಳು ಈಡೇರಿಲ್ಲ. ಆ ಹಿನ್ನೆಲೆಯಲ್ಲಿ ನಾಳೆ(ಅ.26) ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಂಪೆನಿಗಳ ಮಾಲಕರೊಂದಿಗೆ ಸಭೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರದಿಂದ ಪ್ರತಿ ಟನ್ ಕಬ್ಬಿಗೆ 1ಸಾವಿರ ರೂ. ಹೆಚ್ಚುವರಿ ಪ್ರೋತ್ಸಾಹ ಧನ ಮತ್ತು ಕಾರ್ಖಾನೆಗಳಿಂದ 500 ರೂ.ಹೆಚ್ಚುವರಿ ಹಣ ಕೊಡಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಒಂದು ವಾರದ ಹಿಂದೆ ಇದೇ ವಿಷಯಕ್ಕೆ ರೈತರು ಬೆಳಗಾವಿಯಿಂದ ಧಾರವಾಡ ಚಲೋ ಆರಂಭಿಸಿದ್ದರು. ಕೊನೆಗೆ ಸಿಎಂ ಮಧ್ಯಪ್ರವೇಶ ಮಾಡಿ ಶೀಘ್ರದಲ್ಲೇ ಸಭೆ ಕರೆಯುವ ಭರವಸೆ ನೀಡಿದ್ದರು.
ಆ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಂಪೆನಿಗಳ ಮಾಲಕರೊಂದಿಗೆ ಪ್ರತ್ಯೇಕ ಸಭೆ ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲಿದ್ದಾರೆ. ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಆಧರಿಸಿ ರೈತರ ಹೋರಾಟದ ಮುಂದಿನ ಹಾದಿಯನ್ನು ನಿರ್ಧರಿಸುವ ಸಾಧ್ಯತೆ ಇದೆ.
ಪ್ರತಿ ಟನ್‍ಗೆ 5,500 ರೂ. ನೀಡುವುದು ಕಾರ್ಖಾನೆಗಳಿಗೆ ಕಷ್ಟವಾಗಬಹುದು ಎಂದು ಕಾರ್ಖಾನೆ ಮಾಲೀಕರ ಅಭಿಪ್ರಾಯ ಆಗಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯಪ್ರವೇಶಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಲಕರು ಆಗ್ರಹಿಸಿದ್ದಾರೆ.
‘ಬೆಳಗಾವಿಯಲ್ಲಿ ಅ.26ರಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಂಪೆನಿಗಳ ಮಾಲಕರ ಸಭೆ ಕರೆಯಲಾಗಿದೆ. ರೈತರ ಜೊತೆ ಮೊದಲು ಮಾತನಾಡಲಿದ್ದು, ಕೇಂದ್ರ ಸಚಿವರು ಆಗಮಿಸಲಿದ್ದಾರೆ. ಕಬ್ಬು ನುರಿಸಬೇಕೆಂಬ ಒತ್ತಡವು ಇದೆ. ಈ ಸಭೆಗೆ ರೈತರು, ಸಕ್ಕರೆ ಕಂಪೆನಿಗಳ ಮಾಲಕರು, ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುವುದು’
-ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ






