ಯೋಜನೆಗಳ ಭರಾಟೆ, ಹಣದ ಕೊರತೆ : ಸಿಎಂ ಡಿ.ಕೆ.ಶಿವಕುಮಾರ್‌ರ ಹೊಸ ಯೋಜನೆಗಳಿಗೆ ನಗದು ಬಿಕ್ಕಟ್ಟು; ವರದಿ

ಬೆಂಗಳೂರು : ಯೋಜನೆಗಳ ಘೋಷಣೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಣಕಾಸು ಇಲಾಖೆ ವಾಸ್ತವಿಕವಾಗಿರುವಂತೆ ಸಲಹೆ ನೀಡಿದೆ. ಹೆಚ್ಚುವರಿ ಸಂಪನ್ಮೂಲಗಳ ಲಭ್ಯತೆಯಿಲ್ಲದೆ ಹೊಸ ಯೋಜನೆಗಳಿಗೆ ಹಣ ಒದಗಿಸುವುದು ಕಷ್ಟಕರವಾಗಲಿದೆ ಎಂದು ಇಲಾಖೆ ತಿಳಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಬಗ್ಗೆ ಹಣಕಾಸು ಇಲಾಖೆಯ ಆಂತರಿಕ ಟಿಪ್ಪಣಿಯನ್ನು ಉಲ್ಲೇಖಿಸಿರುವ ವರದಿಯು, ಲಭ್ಯವಿರುವ ಹಣಕಾಸಿನ ಮಿತಿಯನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕವಾಗಿರುವುದು ಸೂಕ್ತ ಎಂದು ಇಲಾಖೆ ಹೇಳಿರುವುದಾಗಿ ತಿಳಿಸಿದೆ.
10,000 ಕೋಟಿ ರೂ. ವೆಚ್ಚದ ‘ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಕುರಿತು ಅಭಿಪ್ರಾಯ ಕೋರಿದಾಗ ಹಣಕಾಸು ಇಲಾಖೆ ಈ ಸಲಹೆ ನೀಡಿದೆ. ಈ ಯೋಜನೆಯಡಿ 15,000 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಉದ್ದೇಶಿಸಿದೆ.
ನಗದು ಕೊರತೆಯು ಸಾರಿಗೆ ನಿಗಮಗಳು, ನೀರಾವರಿ ನಿಗಮಗಳು ಮತ್ತು ವಿದ್ಯುತ್ ಕಂಪನಿಗಳಲ್ಲಿನ ವೇತನ ಪಾವತಿಗಳ ಮೇಲೂ ಈಗಾಗಲೇ ಪರಿಣಾಮ ಬೀರುತ್ತಿದೆ. ಅಲ್ಲದೆ, ಸಬ್ಸಿಡಿ ಪಾವತಿಗಳು ಮತ್ತು ಇತರ ಮಾಸಿಕ ಬಿಡುಗಡೆಗಳಲ್ಲಿ ವಿಳಂಬಕ್ಕೂ ಕಾರಣವಾಗುತ್ತಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಬಜೆಟ್‌ನ ಲ್ಲಿ ಅನುದಾನ ಮೀಸಲಿಡದ ದುಬಾರಿ ಯೋಜನೆಗಳನ್ನು ಆರಂಭಿಸುವುದರಿಂದ “ನಗದು ಹರಿವು ಮತ್ತು ಆರ್ಥಿಕ ನಿರ್ವಹಣೆಗೆ ಸಮಸ್ಯೆಗಳು ಎದುರಾಗುತ್ತವೆ” ಎಂದು ಇಲಾಖೆ ಎಚ್ಚರಿಸಿದೆ.
ಹೊಸ ಪ್ರಸ್ತಾವನೆಗಳಿಗೆ ಹಣ ಒದಗಿಸಬೇಕಾದರೆ, ಇತರ ಇಲಾಖೆಗಳಿಗೆ ಈಗಾಗಲೇ ನಿಗದಿಪಡಿಸಿರುವ ಅನುದಾನದಲ್ಲಿ ಕಡಿತ ಮಾಡಬೇಕಾಗುತ್ತದೆ. “ಇದು ಇತರ ಕಾಮಗಾರಿಗಳನ್ನು ವಿಳಂಬಗೊಳಿಸಬಹುದು ಅಥವಾ ಸ್ಥಗಿತಗೊಳಿಸಬಹುದು,” ಎಂದು ಹಣಕಾಸು ಇಲಾಖೆ ತಿಳಿಸಿದೆ.
ಇದರ ಪರಿಣಾಮವಾಗಿ, ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ಡಿ.ಕೆ. ಶಿವಕುಮಾರ್ ಅವರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಕಾರ್ಯಕ್ರಮಗಳ ಅನುದಾನಕ್ಕೆ ಕತ್ತರಿ ಹಾಕಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ವರದಿ ಅಂದಾಜಿಸಿದೆ.
“2026-27ನೇ ಸಾಲಿನ ಬಜೆಟ್ ಅಗತ್ಯತೆಗಳನ್ನು ಪೂರೈಸಲು ಕರ್ನಾಟಕವು ಈಗಾಗಲೇ ತನ್ನ ಸಾಲ ಪಡೆಯುವ ಮಿತಿಯನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ಹೀಗಾಗಿ, ಯಾವುದೇ ಹೊಸ ಯೋಜನೆಗಳಿಗೆ ಹಣ ಒದಗಿಸಲು ಹೆಚ್ಚುವರಿಯಾಗಿ ಸಾಲ ಪಡೆಯುವ ಯಾವುದೇ ಅವಕಾಶ ರಾಜ್ಯಕ್ಕಿಲ್ಲ” ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಕರ್ನಾಟಕವು ಪ್ರಸ್ತುತ ಕಂದಾಯ ಕೊರತೆಯನ್ನು ಎದುರಿಸುತ್ತಿದ್ದು, ರಾಜ್ಯದ ಆದಾಯದ ಬಹುಪಾಲು ವೇತನ, ಪಿಂಚಣಿ, ಸಬ್ಸಿಡಿ ಹಾಗೂ ಬಡ್ಡಿ ಪಾವತಿಗಳಿಗೆ ವೆಚ್ಚವಾಗುತ್ತಿದೆ. ಇದಲ್ಲದೆ, ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ ಯೋಜನೆಗಳು’ ವಾರ್ಷಿಕವಾಗಿ ಸುಮಾರು 50,000 ಕೋಟಿ ರೂ. ವೆಚ್ಚವನ್ನು ಉಂಟುಮಾಡುತ್ತಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ 7,042.69 ಕೋಟಿ ರೂ . ಹೆಚ್ಚುವರಿ ವೆಚ್ಚಕ್ಕೆ ಪೂರಕ ಅಂದಾಜುಗಳನ್ನು ಮಂಡಿಸಿದ್ದಾರೆ. ಅವರ ಹೊಸ ಘೋಷಣೆಗಳಲ್ಲಿ ಒಂದಾದ ‘ಭಾರತ್ ಜೋಡೋ ಯೂತ್ ಕ್ಲಬ್’ಗಳ ಸ್ಥಾಪನೆಗೆ ಮೀಸಲಾದ 1,000 ಕೋಟಿ ರೂ. ಇದರಲ್ಲಿ ಸೇರಿದೆ.
ಸರ್ಕಾರವು ಪ್ರಸ್ತುತ ಚಾಲ್ತಿಯಲ್ಲಿರುವ 2 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಹಣ ಪಾವತಿಸಬೇಕಿದೆ. ಇದರ ಜೊತೆಗೆ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಬಾಕಿ ಬಿಲ್ಗಳ ಮೊತ್ತವೇ 36,136 ಕೋಟಿ ರೂ. ಇದೆ ಎಂದು ಹಣಕಾಸು ಇಲಾಖೆ ಬೆಟ್ಟುಮಾಡಿದೆ.
ಹಣಕಾಸು ಸಚಿವರಾಗಿರುವ ಶಿವಕುಮಾರ್ ಅವರ ಸಂಕಷ್ಟಕ್ಕೆ ತೀವ್ರ ಬರಗಾಲವೂ ಮತ್ತಷ್ಟು ಹೊರೆಯಾಗಿದೆ. “ತೀವ್ರ ಬರಗಾಲದ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಂಚಿಕೆ ಮಾಡಿರುವ ಮೊತ್ತಕ್ಕಿಂತಲೂ ಹೆಚ್ಚುವರಿ ಅನುದಾನದ ಅಗತ್ಯವಿದೆ,” ಎಂದು ಹಣಕಾಸು ಇಲಾಖೆ ತಿಳಿಸಿದೆ.
“ಗ್ಯಾರಂಟಿ ಯೋಜನೆಗಳ ವೆಚ್ಚದಲ್ಲಿ ಸುಮಾರು 4,000–5,000 ಕೋಟಿ ರೂ. ಉಳಿಸಲು ನಾವು ನಿರೀಕ್ಷಿಸಿದ್ದೆವು. ಆದರೆ ಬರಗಾಲದಿಂದಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ನೀರೆತ್ತುತ್ತಿದ್ದಾರೆ. ಹೀಗಾಗಿ, ನೀರಾವರಿ ಪಂಪ್ಸೆಟ್ಗಳಿಗೆ ಸಬ್ಸಿಡಿ ನೀಡಲು ಸರ್ಕಾರ ಹೆಚ್ಚುವರಿಯಾಗಿ 4,000–5,000 ಕೋಟಿ ರೂ. ವೆಚ್ಚ ಮಾಡಬೇಕಾಗಬಹುದು” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ.






