ಸಂಚಾರ ದಟ್ಟಣೆ ಹಿನ್ನೆಲೆ : ವಿಪ್ರೋ ಮುಖ್ಯಸ್ಥ ಅಝೀಂ ಪ್ರೇಮ್‍ಜಿಗೆ ಸಿಎಂ ಪತ್ರ

ಬೆಂಗಳೂರು, ಸೆ.23: ಇಲ್ಲಿನ ಹೊರ ವರ್ತುಲ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಹೆಚ್ಚಳವಾಗುತ್ತಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಈ ಸಂಬಂಧ ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಪ್ರೋ ಮುಖ್ಯಸ್ಥ ಅಝೀಂ ಪ್ರೇಮ್‍ಜಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.
ದಿನನಿತ್ಯ ಬೆಳಗ್ಗೆ ಹಾಗೂ ಸಂಜೆ ಇಬ್ಲೂರು ಜಂಕ್ಷನ್‍ನಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಕೋರಿದ್ದಾರೆ.
ಪತ್ರದಲ್ಲಿ ಏನಿದೆ?: ಅಝೀಂ ಪ್ರೇಮ್‍ಜಿ ಅವರೇ, ಕರ್ನಾಟಕದ ಐಟಿ ಕ್ಷೇತ್ರ ಪ್ರಗತಿ ಮತ್ತು ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವಿಪ್ರೋ ದ ನಿರಂತರ ಕೊಡುಗೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಒಂದು.
ವಿಶೇಷವಾಗಿ ಇಬ್ಲೂರು ಜಂಕ್ಷನ್‍ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್‍ನಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಅಗತ್ಯ ಭದ್ರತಾ ಕ್ರಮಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕಿದೆ.
ಇದರಿಂದ ಹೊರ ವರ್ತುಲ ರಸ್ತೆಯ ಪಕ್ಕದ ಪ್ರದೇಶಗಳಲ್ಲಿ, ವಿಶೇಷವಾಗಿ ಪೀಕ್ ಅವರ್‍ನಲ್ಲಿ ಸುಮಾರು ಶೇ.30 ರಷ್ಟು ದಟ್ಟಣೆಯನ್ನು ಕಡಿಮೆ ಮಾಡಬಹುದು. ಈ ವಿಷಯದಲ್ಲಿ ನಿಮ್ಮ ಬೆಂಬಲವು ಸಂಚಾರ ಅಡಚಣೆಗಳನ್ನು ನಿವಾರಿಸಲು ಅನುಕೂಲವಾಗಲಿದೆ.
ಈ ಬಗ್ಗೆ ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಸ್ಪರ ಸ್ವೀಕಾರಾರ್ಹ ಯೋಜನೆಯನ್ನು ರೂಪಿಸಬೇಕು ಎಂದು ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ವಿಪ್ರೋ ಕ್ಯಾಂಪಸ್ ಮೂಲಕ ಹಾದು ಹೋಗಲು ವಾಹನಗಳಿಗೆ ಅನುಮತಿ ನೀಡಿದರೆ, ಹೊರ ವರ್ತುಲ ರಸ್ತೆಯಲ್ಲಿ ಶೇ.30 ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಹೀಗಾಗಿ ವಿಪ್ರೋ ಮುಖ್ಯಸ್ಥರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.







