ಚಿಕ್ಕಮಗಳೂರು: ಹರಿದು ಬಂದ ಪ್ರವಾಸಿಗರ ದಂಡು; ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್

ಚಿಕ್ಕಮಗಳೂರು: ವೀಕೆಂಡ್ ಹಿನ್ನೆಲೆಯಲ್ಲಿ ರವಿವಾರ ತಾಲೂಕಿನ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ ಹಿನ್ನೆಲೆಯಲ್ಲಿ ಗಿರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಪ್ರವಾಸಿಗರ ವಾಹನಗಳು ನಿಂತಲ್ಲೇ ನಿಂತಿದ್ದು, ಪ್ರವಾಸಿಗರು ಪರದಾಡಿದರು.
ವಾರಾಂತ್ಯದಲ್ಲಿ ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿಗೆ ಸಾವಿರಾರು ಪ್ರವಾಸಿಗರು ಆಗಮಿಸುವುದು ಸಾಮಾನ್ಯ ಸಂಗತಿಯಾಗಿದೆ. ರವಿವಾರವೂ ಭಾರೀ ಸಂಖ್ಯೆಯಲ್ಲಿ ಗಿರಿಶ್ರೀಣಿ ನೋಡಲು ಆಗಮಿಸಿದ ಹಿನ್ನೆಲೆಯಲ್ಲಿ ಗಿರಿ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಸಾವಿರಾರು ವಾಹನಗಳು ಏಕಕಾಲದಲ್ಲಿ ಸಂಚರಿಸಿದ ಪರಿಣಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಎದುರಿನಿಂದ ಬಂದ ಲಾರಿ ವಾಹನಗಳ ಮಧ್ಯೆ ಸಿಲುಕಿಕೊಂಡ ಪರಿಣಾಮ ಎರಡು ಬದಿಯಿಂದಲೂ ವಾಹನಗಳ ಸಂಚಾರ ಸಾಧ್ಯವಾಗದೇ ಸುಮಾರು 1 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿತ್ತು. ಟ್ರಾಫಿಕ್ ಜಾಮ್‍ನಿಂದಾಗಿ ಪ್ರವಾಸಿಗರು ಪರದಾಡಿದರು. ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಟ್ಟರು.





