‘ಸಾರಿಗೆ ನೌಕರರ ಮುಷ್ಕರ’ | ನಾಳೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ಗಳು ರಸ್ತೆಗೆ ಇಳಿಯಲ್ಲ!

ಸಾಂದರ್ಭಿಕ ಚಿತ್ರ
ಬೆಂಗಳೂರು : ಮೂವತ್ತೆಂಟು ತಿಂಗಳ ವೇತನ ಬಾಕಿ ಸೇರಿದಂತೆ ಸಾರಿಗೆ ನೌಕರರ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ನಿರಾಕರಿಸಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ನೌಕರರ ಜಂಟಿ ಕ್ರಿಯಾ ಸಮಿತಿ, ನಿಗಮಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗಿನ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ನೌಕರರು ಕರೆ ನೀಡಿರುವ ಸಾರಿಗೆ ಮುಷ್ಕರ ನಿಶ್ಚಿತವಾಗಿದ್ದು, ನಾಳೆ(ಆ.5) ಬೆಳಗ್ಗೆ 6ಗಂಟೆಯಿಂದಲೇ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ.
‘ಬೆಳಗ್ಗೆ 6ಗಂಟೆಯಿಂದ ಸಾರಿಗೆ ಸಂಸ್ಥೆಗಳ ಯಾವುದೇ ನೌಕರ ಕರ್ತವ್ಯಕ್ಕೆ ಹಾಜರಾಗುವುದಿಲ್ಲ, ಬಸ್ಗಳನ್ನು ಓಡಿಸುವುದಿಲ್ಲ. ಸರಕಾರದ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ, ಎಲ್ಲ ಬಸ್ಗಳನ್ನು ಡಿಪೋಗಳಲ್ಲೇ ನಿಲ್ಲಿಸಿ, ಶಾಂತ ರೀತಿಯಲ್ಲೇ ಮುಷ್ಕರ ನಡೆಸಲಿದ್ದೇವೆ’ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಎಚ್ಚರಿಸಿದ್ದಾರೆ.
ಸೋಮವಾರ ವಿಧಾನಸೌಧದ 3ನೇ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, ಕೆಎಸ್ಸಾರ್ಟಿಸಿ ಸಂಘಟನೆಗಳ ಒಕ್ಕೂಟದ ಮಂಜುನಾಥ್ ಉಪಸ್ಥಿತಿಯಲ್ಲಿ ಸುದೀರ್ಘ ಸಭೆ ನಡೆಸಿದರು.
ಮುಷ್ಕರ ಹಿಂಪಡೆಯಲು ಸಿಎಂ ಮನವಿ: ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಜತೆ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಹೀಗಾಗಿ ನಾಳೆ ಕರೆದಿರುವ ಮುಷ್ಕರವನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘2016ರಲ್ಲಿ ನಾನು ಸಿಎಂ ಆಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ.12.5ರಷ್ಟು ಹೆಚ್ಚಳ ಮಾಡಲಾಗಿತ್ತು. ಬಳಿಕ 2020ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರಕಾರ ವೇತನ ಪರಿಷ್ಕರಣೆ ಮಾಡಿಲ್ಲ. 2023ರ ಮಾರ್ಚ್ 1ರಂದು ಹಿಂದಿನ ಸರಕಾರ ಅಧಿಕಾರದಲ್ಲಿದ್ದಾಗ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ ಶೇ.15ರಷ್ಟು ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು.
ಆ ಬಳಿಕ ನೌಕರರ ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ 2022ರ ಜನವರಿ 1ರಿಂದ 2023ರ ಫೆಬ್ರವರಿ 28ರ ವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಮೂರ್ತಿ ಸಮಿತಿಯ ಶಿಫಾರಸ್ಸನ್ನು ಸರಕಾರ ಒಪ್ಪಿಕೊಂಡಿದೆ. ಸಾರಿಗೆ ನೌಕರರು ಸದರಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀನಿವಾಸಮೂರ್ತಿ ಸಮಿತಿಯ ಶಿಫಾರಸು ಆಧಾರದಲ್ಲಿ ಈ ಕುರಿತು 2023ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಅಂದಿನ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದೀಗ 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ. ನಾವು ಅಧಿಕಾರಕ್ಕೆ ಬಂದಾಗ ಎಲ್ಲ ನಿಗಮಗಳಲ್ಲಿ ಒಟ್ಟಾರೆ 4 ಸಾವಿರ ಕೋಟಿ ರೂ.ಸಾಲ ಇತ್ತು. 2018ರಲ್ಲಿ ಕೇವಲ 14 ಕೋಟಿ ರೂ.ಮಾತ್ರ ಬಾಕಿಯಿತ್ತು.
ಪ್ರಸ್ತುತ ಯಾವ ಸಾರಿಗೆ ನಿಗಮವೂ ಲಾಭದಲ್ಲಿಲ್ಲ. ಸರಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲ ಸಾರಿಗೆ ನಿಗಮಗಳ ನೌಕರರು ಮುಷ್ಕರವನ್ನು ಕೈಬಿಟ್ಟು ಸಹಕರಿಸಬೇಕು. ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಎಲ್ಲ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರಕಾರ ಸಿದ್ಧವಿದೆ ಎಂದು ಸಿದ್ದರಾಮಯ್ಯ ಕೋರಿದರು.
‘ಮುಷ್ಕರ’ದಿಂದ ಹಿಂದೆ ಸರಿಯುವುದಿಲ್ಲ: ಸಾರಿಗೆ ನೌಕರರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಈಗಾಗಲೇ ಘೋಷಿಸಿರುವಂತೆ ಸಾರಿಗೆ ನೌಕರರ ಮುಷ್ಕರ ನಡೆಯಲಿದೆ. 38 ತಿಂಗಳ ವೇತನ ಬಾಕಿ, ವೇತನ ಹೆಚ್ಚಳ ಸೇರಿದಂತೆ ಸಾರಿಗೆ ಸಂಸ್ಥೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು ಎಂದು ಅನಂತಸುಬ್ಬರಾವ್ ಆಗ್ರಹಿಸಿದರು.
‘1,800 ಕೋಟಿ ರೂ. ವೇತನ ಬಾಕಿ, ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಾಗಿತ್ತು. ಆದರೆ, ಸರಕಾರ ವೇತನ ಹಿಂಬಾಕಿ ಕೊಡಲು ಒಪ್ಪುತ್ತಿಲ್ಲ. ಸಾರಿಗೆ ನೌಕರರು 38 ತಿಂಗಳ ವೇತನ ಬಾಕಿ ಕೇಳಿದರೆ, 14 ತಿಂಗಳ ವೇತನ ಬಾಕಿ ಕೊಡಲು ಸರಕಾರ ಒಪ್ಪಿದೆ. ಹೀಗಾಗಿ ಸಂಧಾನ ಸಭೆ ವಿಫಲವಾಗಿದೆ’ ಎಂದು ಅವರು ತಿಳಿಸಿದರು.
ಶಿಸ್ತು ಕ್ರಮದ ಎಚ್ಚರಿಕೆ: ಈ ಮಧ್ಯೆ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರು ಹಾಜರಾದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಎಲ್ಲ ನೌಕರರ ರಜೆ ರದ್ದು ಮಾಡಲಾಗಿದೆ. ಕರ್ತವ್ಯಕ್ಕೆ ಗೈರು ಹಾಜರಾದರೆ ವೇತನ ಕಡಿತ ಮಾಡಲಾಗುವುದು ಎಂದು ನೌಕರರಿಗೆ ಎಚ್ಚರಿಕೆಯ ಸಂದೇಶವನ್ನು ಸಾರಿಗೆ ಇಲಾಖೆ ನೀಡಿದೆ.
‘ಸಾರಿಗೆ ನೌಕರರು 38 ತಿಂಗಳ ವೇತನ ಬಾಕಿ ಹಾಗೂ ರಾಜ್ಯ ಸರಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಸಿಎಂ, ಈ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸೋಣ. ಹಿಂದಿನ ಸರಕಾರ 2023ರ ಮಾ. 17ರಿಂದ ವೇತನ ಪರಿಷ್ಕರಣೆ ಮಾಡಿದೆ. ಆದೇಶ ಅಂದಿನಿಂದಲೇ ಜಾರಿಯಾಗಿದೆ. ಹಾಗಾಗಿ 2027ರಲ್ಲಿ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಮುಷ್ಕರಕ್ಕೆ ಮುಂದಾದರೆ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ವಿಧಾನ ಮಂಡಲ ಅಧಿವೇಶನದ ಬಳಿಕ ಸಾರಿಗೆ ನೌಕರರ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದೇವೆ’
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
‘ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಒಟ್ಟು ನಾಲ್ಕು ನಿಗಮಗಳಲ್ಲಿ 24,154 ಸಾರಿಗೆ ಬಸ್ಸುಗಳಿದ್ದು, 1.02 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ನಾಲ್ಕು ನಿಗಮಗಳ ಒಂದು ದಿನದ ಆದಾಯವು 37ಕೋಟಿ ರೂ.ಗಳಾಗಿದ್ದು, ಮುಷ್ಕರದಿಂದ ಆದಾಯ ನಷ್ಟವಾಗಲಿದೆ. ಅಲ್ಲದೆ ರಾಜ್ಯಾದ್ಯಂತ ನಿಗಮಗಳ ಬಸ್ಗಳಲ್ಲಿ 1.17 ಕೋಟಿ ಜನರು ಪ್ರತಿನಿತ್ಯ ಪ್ರಯಾಣಿಸುತ್ತಿದ್ದು, ‘ಶಕ್ತಿ ಯೋಜನೆ’ಯಡಿ 80 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಮುಷ್ಕರದಿಂದ ಇವರೆಲ್ಲರೂ ಸಮಸ್ಯೆಯನ್ನು ಅನುಭವಿಸುವಂತೆ ಆಗುತ್ತದೆ.
ಮುಷ್ಕರದಲ್ಲಿ ಪಾಲ್ಗೊಳ್ಳಬೇಡಿ: ‘ಸಾರಿಗೆ ನೌಕರರ ಕಾರ್ಮಿಕ ಸಂಘಟನೆಗಳು ನಾಳೆ(ಆ.5) ಕರೆ ನೀಡಿರುವ ಮುಷ್ಕರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆ ಹಿನ್ನೆಲೆಯಲ್ಲಿ ಎಲ್ಲ ನೌಕರರು ಹೈಕೋರ್ಟ್ ಆದೇಶವನ್ನು ಗೌರವಿಸಬೇಕು. ಅಲ್ಲದೆ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೌಕರರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಯಾವುದೇ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಬಾರದು’
-ಅಕ್ರಂ ಪಾಷ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ







