ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ : ಬಿ.ಜಯದೇವರಾಜೇ ಅರಸ್

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರ 26 ತಿಂಗಳ ಬಾಕಿ ಹಣ 1,272 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ಬಿ.ಜಯದೇವರಾಜೇ ಅರಸ್ ತಿಳಿಸಿದ್ದಾರೆ.
ಶನಿವಾರ ನಗರದ ಎಐಟಿಯುಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.18ರ ಸರಕಾರದ ಏಕಪಕ್ಷೀಯ ಆದೇಶವನ್ನು ಸೂಕ್ತವಾಗಿ ತಿದ್ದುಪಡಿ ಮಾಡಿ 2023ರ ಡಿ.31ರಂದು ಚಾಲ್ತಿಯಲ್ಲಿದ್ದ ಮೂಲ ವೇತನದ ಶೇ.25ರಷ್ಟು ಹೆಚ್ಚಿಸಿ 2024ರ ಜ.1ರಿಂದ ನಾಲ್ಕು ವರ್ಷಗಳ ಅವಧಿಗೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಚಾಲ್ತಿಯಲ್ಲಿರುವ ಕೈಗಾರಿಕಾ ಒಪ್ಪಂದಗಳ ಪ್ರಕಾರ 2022ರ ಜು.1ರಲ್ಲಿದ್ದ ಶೇ.31 ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಾರ್ಷಿಕ ಬಡ್ತಿಯನ್ನು 2024ರ ಜ.25ರ ಬೇಡಿಕೆ ಪಟ್ಟಿಯಲ್ಲಿರುವಂತೆ ಹೆಚ್ಚಿಸಿ ವೇತನ ಶ್ರೇಣಿ ರಚಿಸಬೇಕು. ಸದರಿ ಅವಧಿಯ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.
ಬಾಟಾ ಮತ್ತಿತರ ಭತ್ಯೆಗಳನ್ನು ಹೆಚ್ಚಿಸಬೇಕು: 2020ರ ಜ.1ರಿಂದ ಡಿ.31ರ ವರೆಗಿನ 12 ತಿಂಗಳ ಉಳಿದಿರುವ ಬಾಕಿ ಹಣವನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕು. ಫಾರಂ-4 ಮತ್ತಿತರ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿಯ ಜೊತೆ ಚರ್ಚಿಸಿ ಒಂದು ತಿಂಗಳ ಕಾಲಮಿತಿಯಲಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಾರಿಗೆ ಕಾರ್ಮಿಕರ ಮುಖಂಡರಾದ ಜ್ಯೋತಿ ಅನಂತ ಸುಬ್ಬರಾವ್, ಮಂಜುನಾಥ್ ಎಚ್.ಎಸ್., ಎಚ್.ಡಿ.ರೇವಪ್ಪ, ಗಂಡಸಿ ಸದಾನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.






